ನವದೆಹಲಿ: ಕಾನೂನುಬಾಹಿರ ಬಂಧನ ಸೇರಿದಂತೆ ನಾಗರಿಕರ ಜೀವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ನೇರ ಪರಿಣಾಮ ಬೀರುವ ತುರ್ತು ಪ್ರಕರಣಗಳಲ್ಲಿ, ನ್ಯಾಯಾಲಯದ ನಿಯಮಿತ ಕೆಲಸದ ಅವಧಿಯನ್ನು ಮೀರಿ ಕೂಡ ನ್ಯಾಯಾಂಗದ ನೆರವು ಪಡೆಯಲು ಅನುಕೂಲವಾಗುವಂತೆ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ರೂಪಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.
ಈ ಕುರಿತು ವಕೀಲ ಮಹೇರವಿಶ್ ರೇನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ್ ಅವರನ್ನೊಳಗೊಂಡ ಪೀಠವು ದೇಶದ ಎಲ್ಲಾ ಹೈಕೋರ್ಟ್ಗಳಿಗೆ ನೋಟಿಸ್ ಜಾರಿಗೊಳಿಸಿದೆ.
ವಿಚಾರಣೆ ವೇಳೆ, ತುರ್ತು ಪ್ರಕರಣಗಳಿಗೆ ಮಾತ್ರ ಮೀಸಲಾಗಿರುವ 24×7 ನ್ಯಾಯಾಲಯಗಳ ವ್ಯವಸ್ಥೆಯನ್ನು ತುರ್ತು ಅಲ್ಲದ ಪ್ರಕರಣಗಳಿಗೂ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇಂತಹ ಎಸ್ಒಪಿ ರೂಪಿಸುವ ಹೊಣೆಗಾರಿಕೆ ನ್ಯಾಯಾಂಗಕ್ಕಿಂತ ಕಾರ್ಯಾಂಗದ ಮೇಲಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅರ್ಜಿದಾರರ ಪರವಾಗಿ, ವಾರಾಂತ್ಯ ಅಥವಾ ಸರ್ಕಾರಿ ರಜಾದಿನಗಳಲ್ಲಿ ತಡರಾತ್ರಿ ನಡೆಯುವ ಬಂಧನ, ಮುಂಜಾನೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ, ಗಡೀಪಾರು ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ತಕ್ಷಣ ನ್ಯಾಯಾಲಯದ ಮೊರೆ ಹೋಗುವ ಅವಕಾಶ ಅಗತ್ಯವಿದೆ ಎಂದು ವಾದಿಸಲಾಯಿತು.
ಪ್ರಸ್ತುತ ನ್ಯಾಯಾಲಯಗಳ ಕಾರ್ಯವ್ಯವಸ್ಥೆ ನಿಗದಿತ ಕೆಲಸದ ಸಮಯ, ಸೀಮಿತ ಕಾರ್ಯದಿನಗಳು ಹಾಗೂ ರಜಾ ಪೀಠಗಳ ಮಿತಿಯಿಂದ ಕೂಡಿರುವುದರಿಂದ, ತುರ್ತು ಸಂದರ್ಭಗಳಲ್ಲಿ ನ್ಯಾಯಾಂಗವನ್ನು ತಕ್ಷಣ ಸಂಪರ್ಕಿಸಲು ಸಾಧ್ಯವಾಗದೇ ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.