ಶನಿವಾರ, 17 ಅಕ್ಟೋಬರ್ 2026
ರಾಷ್ಟ್ರೀಯ

ಟಿಇಟಿ ಮರುಪರೀಕ್ಷೆ ವಿಳಂಬ| 6 ಲಕ್ಷ ಅಭ್ಯರ್ಥಿಗಳ ಭವಿಷ್ಯ ಅನಿಶ್ಚಿತ: ರಾಹುಲ್‌ ಗಾಂಧಿ ಕಳವಳ

ಮುಂಬೈ: ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ರದ್ದುಗೊಂಡು ಎರಡು ವಾರಗಳು ಕಳೆದರೂ ಮರುಪರೀಕ್ಷೆಯ ದಿನಾಂಕವನ್ನು ಇನ್ನೂ ಪ್ರಕಟಿಸದಿರುವುದರಿಂದ ಸುಮಾರು ಆರು ಲಕ್ಷ ಅಭ್ಯರ್ಥಿಗಳ ಭವಿಷ್ಯ ಅನಿಶ್ಚಿತತೆಯಲ್ಲಿ ಸಿಲುಕಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ವರ್ಷಗಳ ಕಾಲ ಶ್ರಮಪಟ್ಟು, ಪರೀಕ್ಷಾ ಶುಲ್ಕ ಪಾವತಿಸಿ, ದೂರದ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣ ಬೆಳೆಸಿ ಸಿದ್ಧತೆ ನಡೆಸಿದ ಪ್ರಾಮಾಣಿಕ ಅಭ್ಯರ್ಥಿಗಳು ವ್ಯವಸ್ಥೆಯ ವೈಫಲ್ಯಕ್ಕೆ ಬಲಿಯಾಗಿದ್ದಾರೆ ಎಂದು ಟೀಕಿಸಿದ್ದಾರೆ.”ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರು ನಿರ್ಭೀತಿಯಾಗಿ ಓಡಾಡುತ್ತಿರುವಾಗ, ಕಠಿಣ ಪರಿಶ್ರಮ ಪಟ್ಟ ಅಭ್ಯರ್ಥಿಗಳು ಯಾವುದೇ ಸ್ಪಷ್ಟತೆಯಿಲ್ಲದೆ ಕಾಯುವಂತಾಗಿದೆ. ದೇಶದ ಭವಿಷ್ಯವನ್ನು ರೂಪಿಸಬೇಕಾದ ಭಾವಿ ಶಿಕ್ಷಕರೇ ಇಂದು ಅನ್ಯಾಯ ಅನುಭವಿಸುತ್ತಿದ್ದಾರೆ” ಎಂದು ರಾಹುಲ್‌ ಹೇಳಿದ್ದಾರೆ.

ಸರ್ಕಾರ ವಿಳಂಬ ಮಾಡದೆ ತಕ್ಷಣವೇ ಟಿಇಟಿ ಮರುಪರೀಕ್ಷೆಯ ದಿನಾಂಕವನ್ನು ಘೋಷಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದ ಅಧಿಕಾರಿಗಳು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವ್ಯವಸ್ಥೆಯ ವೈಫಲ್ಯದಿಂದ ನಷ್ಟ ಅನುಭವಿಸಿರುವ ಅಭ್ಯರ್ಥಿಗಳಿಗೆ ಮುಂದಿನ ಪರೀಕ್ಷೆಗಳಲ್ಲಿ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದೇಶದಾದ್ಯಂತ ಮರುಮರು ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಬಿಕ್ಕಟ್ಟಿನ ಕುರಿತು ಚರ್ಚಿಸಲು ಜುಲೈ 17ರಂದು ಡೆಹ್ರಾಡೂನ್‌ನಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ರಾಹುಲ್‌ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಂಬಂಧಿತ ಸುದ್ದಿಗಳು