ಶನಿವಾರ, 17 ಅಕ್ಟೋಬರ್ 2026
ರಾಷ್ಟ್ರೀಯ

SIR ಪರಿಷ್ಕರಣೆ: ಈ ನಾಲ್ಕೂ ರಾಜ್ಯಗಳಲ್ಲಿ ಮತದಾರರ ಕರಡು ಪಟ್ಟಿಯಿಂದ 22.55 ಲಕ್ಷ ಹೆಸರು ಹೊರಗೆ

ದಿಲ್ಲಿ: ಒಡಿಶಾ, ಮಣಿಪುರ, ಮಿಜೋರಾಂ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಮೂರನೇ ಹಂತ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿಯಿಂದ ಒಟ್ಟು 22.55 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.

ಈ ನಾಲ್ಕು ರಾಜ್ಯಗಳಲ್ಲಿ ಒಟ್ಟು 3.68 ಕೋಟಿ ಮತದಾರರ ಪೈಕಿ ಶೇ 6.12ರಷ್ಟು ಹೆಸರುಗಳನ್ನು ಸಾವು, ಸ್ಥಳಾಂತರ ಅಥವಾ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಹೆಸರು ನೋಂದಣಿಯಾಗಿದ್ದ ಕಾರಣದಿಂದ ತೆಗೆದುಹಾಕಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಪರಿಷ್ಕೃತ ಕರಡು ಪಟ್ಟಿಯನ್ನು ಭಾನುವಾರ ಪ್ರಕಟಿಸಲಾಗಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 6ರಂದು ಬಿಡುಗಡೆ ಮಾಡಲಾಗುತ್ತದೆ.

ಕರಡು ಪಟ್ಟಿಯಲ್ಲಿ ಹೆಸರು ಕೈಬಿಡಲ್ಪಟ್ಟಿರುವ ಬಗ್ಗೆ ಆಕ್ಷೇಪಣೆಗಳಿದ್ದರೆ ಅಥವಾ ಹೊಸ ಹೆಸರು ಸೇರ್ಪಡೆ ಮಾಡಿಸಬೇಕಿದ್ದರೆ, ಸಂಬಂಧಿತ ರಾಜ್ಯಗಳ ಮತದಾರರು ಮುಂದಿನ ಒಂದು ತಿಂಗಳೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಒಡಿಶಾದಲ್ಲಿ ಪರಿಷ್ಕರಣೆಗೆ ಮುನ್ನ 3.33 ಕೋಟಿ ಮತದಾರರ ಹೆಸರುಗಳಿದ್ದವು. ಪರಿಷ್ಕರಣೆ ಬಳಿಕ 20.12 ಲಕ್ಷ ಹೆಸರುಗಳನ್ನು ಕೈಬಿಡಲಾಗಿದ್ದು, ಮತದಾರರ ಸಂಖ್ಯೆ 3.13 ಕೋಟಿಗೆ ಇಳಿದಿದೆ. ಇದು ಒಟ್ಟು ಮತದಾರರ ಶೇ 6.02ರಷ್ಟಾಗಿದೆ.

ಮಣಿಪುರದಲ್ಲಿ 20.93 ಲಕ್ಷ ಮತದಾರರ ಪೈಕಿ 1.58 ಲಕ್ಷ ಹೆಸರುಗಳನ್ನು ಕೈಬಿಡಲಾಗಿದ್ದು, 19.34 ಲಕ್ಷ ಹೆಸರುಗಳು ಉಳಿದಿವೆ. ಇಲ್ಲಿ ಕೈಬಿಡಲಾದ ಪ್ರಮಾಣ ಶೇ 7.5ರಷ್ಟಿದೆ.

ಸಿಕ್ಕಿಂನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿದೆ. 4.71 ಲಕ್ಷ ಮತದಾರರ ಪೈಕಿ 37,724 ಹೆಸರುಗಳನ್ನು (ಶೇ 8) ಕೈಬಿಡಲಾಗಿದ್ದು, ಮತದಾರರ ಸಂಖ್ಯೆ 4.33 ಲಕ್ಷಕ್ಕೆ ಇಳಿದಿದೆ.

ಮಿಜೋರಾಂನಲ್ಲಿ 8.28 ಲಕ್ಷ ಮತದಾರರ ಪೈಕಿ 46,162 ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇವರಲ್ಲಿ 21,295 ಮಂದಿ ಮೃತಪಟ್ಟವರಾಗಿದ್ದು, 22,311 ಮಂದಿ ಸ್ಥಳಾಂತರಗೊಂಡಿದ್ದಾರೆ. ಇನ್ನೂ 2,248 ಮಂದಿ ವಿವಿಧ ಸ್ಥಳಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ನೋಂದಾಯಿಸಿಕೊಂಡಿರುವುದು ಪತ್ತೆಯಾಗಿದೆ.

ಸಂಬಂಧಿತ ಸುದ್ದಿಗಳು