ಶನಿವಾರ, 17 ಅಕ್ಟೋಬರ್ 2026
ರಾಜ್ಯ

SIR | ರಾಜ್ಯದಲ್ಲಿ 1 ಕೋಟಿ ಮತದಾರರ ಹೆಸರು ಕೈಬಿಡಲು BJP ಸಂಚು: ಎಂ.ಲಕ್ಷ್ಮಣ್‌

ಮೈಸೂರು: ರಾಜ್ಯದಲ್ಲಿ ಎಸ್‌ಐಆರ್ ಮೂಲಕ ಒಂದು 1 ಕೋಟಿ ಮಂದಿಯನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಹುನ್ನಾರ ಬಿಜೆಪಿ ನಡೆಸಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದ್ದಾರೆ.

ಭಾನುವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರ ಮೂರು ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿತ್ತು. ಈ ವೇಳೆ ಮತದಾರ ಪಟ್ಟಿಯಿಂದ ದೂರ ಉಳಿದಿದ್ದ ಅರ್ಹರನ್ನು ಪಟ್ಟಿಗೆ ಸೇರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಆದರೆ, ಬಿಜೆಪಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಅರ್ಹರನ್ನೂ ಮತದಾರ ಪಟ್ಟಿಯಿಂದ ದೂರವಿಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕೇಂದ್ರಸರ್ಕಾರ ದೇಶದ 13 ರಾಜ್ಯಗಳಲ್ಲಿ ಎಸ್‌ಐಆರ್ ಮಾಡಿ 6.5 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು, ಆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಕರ್ನಾಟದಲ್ಲಿ 5 ಕೋಟಿ 60 ಲಕ್ಷ ಮತದಾರರಿದ್ದು, ಎಸ್‌ಐಆರ್ ಮ್ಯಾಪಿಂಗ್ ವೇಳೆ 50 ಲಕ್ಷ ಮತದಾರರನ್ನು ಈಗಾಗಲೇ ಹೊರಗಿಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 1 ಕೋಟಿಗೂ ಅಧಿಕ ಮತದಾರರನ್ನ ಮತದಾರರ ಪಟ್ಟಿಯಿಂದ ದೂರ ಇಡುವ ಗುರಿ ಹೊಂದಿದೆ ಎಂದು ಅವರು ದೂರಿದರು.

ಎಸ್.ಐ.ಆರ್ ಪ್ರಕ್ರಿಯೆಗೆ ನೀಡುತ್ತಿರುವ ಎನ್ಯುಮರೇಷನ್ ಅರ್ಜಿಯೂ ಹಲವು ಲೋಪಗಳಿಂದ ಕೂಡಿದೆ. ಪದವಿ ಶಿಕ್ಷಣ ಪಡೆದವರೂ ಈ ಅರ್ಜಿಯನ್ನು ಸುಲಭವಾಗಿ ಭರ್ತಿ ಮಾಡಲಾಗುತ್ತಿಲ್ಲ. 24 ವರ್ಷಗಳ ಹಿಂದಿನ ಮಾಹಿತಿಯನ್ನು ಈಗ ಕೇಳಲಾಗುತ್ತಿದೆ. ಸಣ್ಣ ತಪ್ಪಾದರೂ, ವ್ಯತ್ಯಾಸವಿದ್ದರೂ ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಬರುವುದಿಲ್ಲ. ಸೇರ್ಪಡೆಗೆ ಹಲವು ದಾಖಲೆ ಕೊಡಬೇಕಾದ ತಲೆನೋವು ಜನರಿಗೆ ಎದುರಾಗಲಿದೆ.  ಮತ್ತೆ ಅವರು ಪಟ್ಟಿಗೆ ಸೇರ್ಪಡೆಯಾಗಬೇಕಾದರೆ ಎಲ್ಲಾ ದಾಖಲೆ ನೀಡಬೇಕಿದೆ ಎಂದು ಹೇಳಿದರು.

ಅರ್ಹ ಮತದಾರ ಹೆಸರು ಪಟ್ಟಿಯಿಂದ ಬಿಟ್ಟು ಹೋಗದಂತೆ ನಾವು ನೋಡಿಕೊಳ್ಳುತ್ತಿದ್ದೇವೆ. ಇದನ್ನು ಸಹಿಸದೇ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ..ಎಂ. ರಾಮು, ವಕ್ತಾರ ಕೆ.ಮಹೇಶ್ ಉಪಸ್ಥಿತರಿದ್ದರು.

ಸಂಬಂಧಿತ ಸುದ್ದಿಗಳು