ಜಾತಿ ಮತ್ತು ದುಡ್ಡು ರಾಜಕಾರಣಿಗಳ ದೌರ್ಬಲ್ಯ, ಇದು ಸಮಕಾಲೀನ ರಾಜಕಾರಣದ ಅನಿವಾರ್ಯ ಅನಿಷ್ಠವೂ ಹೌದು. ರಾಜಕೀಯ ಲಾಭಕ್ಕಾಗಿ ರಾಜಕಾರಣಿಯೊಬ್ಬ ಇಂತಹ ದೌರ್ಬಲ್ಯಕ್ಕೆ ಶರಣಾಗುವುದನ್ನು ನಮ್ಮ-ನಿಮ್ಮಂತಹವರು ತಪ್ಪು ಎನ್ನಬಹುದು. ಆದರೆ. ಆ ತಪ್ಪನ್ನು ರಾಜಕಾರಣಿಗಳು ಯಾಕೆ ಮಾಡುತ್ತಿದ್ದಾರೆ ಎನ್ನುವುದು ನಮಗೆ ಅರ್ಥವಾಗುತ್ತದೆ.
ಉದಾಹರಣೆಗೆ, ನಮ್ಮ ರಾಜಕಾರಣಿಗಳು ಪ್ರಬಲ ಜಾತಿಗಳಾದ ಲಿಂಗಾಯತ, ಒಕ್ಕಲಿಗರ ಸ್ವಾಮಿಗಳಿಂದ ಹಿಡಿದು ಹಿಂದುಳಿದ ಮತ್ತು ದಲಿತ ಸಮುದಾಯದ ಜಾತಿಗಳ ಸ್ವಾಮಿಗಳ ವರೆಗೆ ಎಲ್ಲರ ಪಾದಕ್ಕೆ ಅಡ್ಡಬೀಳುತ್ತಾರೆ. ಅವರು ಕೈಯಿಂದ ತೋರಿಸಿರುವುದನ್ನು ತಲೆ ಮೇಲೆ ಹೊತ್ತುಕೊಂಡು ಮಾಡುತ್ತಾರೆ. ಇಷ್ಟು ಮಾಡುವುದಕ್ಕೆ ಅವರಲ್ಲಿ ಸ್ವಾಮಿಗಳ ಬಗ್ಗೆ ಭಯ-ಭಕ್ತಿ ಇದೆ ಎಂದಲ್ಲ.
ಇದಕ್ಕೆ ಎರಡು ಕಾರಣಗಳು, ಮೊದಲನೆಯದು, ಇಷ್ಟು ಮಾಡಿದರೆ ಸ್ವಜಾತಿ ಮತದಾರರು ಪ್ರಭಾವಿತರಾಗಿ ತಮಗೆ ಓಟು ಹಾಕುತ್ತಾರೆ ಮತ್ತು ಸ್ವಾಮಿಗಳು ಅವರ ಮೇಲೆ ಪ್ರಭಾವ ಬೀರುತ್ತಾರೆ ಎಂಬ ನಂಬಿಕೆ. ಎರಡನೆ ಕಾರಣ ಅವರಿಗೆ ಅಡ್ಡಬೀಳದಿದ್ದರೆ ಏನಾದರೂ ಪಿಕಲಾಟ ನಡೆಸಿ ಒಳಗುದ್ದು ನೀಡಬಹುದೆಂಬ ಭಯ. ಸರಿ-ತಪ್ಪುಗಳ ವಿಮರ್ಶೆಯನ್ನು ಪಕ್ಕಕ್ಕಿಟ್ಟು ಇದನ್ನೂ ಅರ್ಥಮಾಡಿಕೊಳ್ಳಬಹುದು.
ಇನ್ನು ಅದಾನಿ, ಅಂಬಾನಿ, ಜಿಂದಾಲ್, ವೇದಾಂತ್, ಬಲ್ದೋಟಾಗಳಿಂದ ಹಿಡಿದು ಸ್ಥಳೀಯ ರಿಯಲ್ ಎಸ್ಟೇಟ್, ಅಬಕಾರಿ ವ್ಯಾಪಾರಿಗಳ ವರೆಗೆ ಎಲ್ಲರ ಕಿಸೆಗೆ ರಾಜಕಾರಣಿಗಳು ಅಡ್ಡ ಬಿದ್ದೇಬೀಳುತ್ತಾರೆ. ಚುನಾವಣೆಗೆ ದುಡ್ಡು ಬೇಕೇಬೇಕಾಗಿರುವುದರಿಂದ ಇಲ್ಲಿಯೂ ಸರಿ-ತಪ್ಪುಗಳ ವಿಮರ್ಶೆಯನ್ನು ಪಕ್ಕಕ್ಕಿಟ್ಟು ಅವರನ್ನು ಅರ್ಥಮಾಡಿಕೊಳ್ಳಬಹುದು.
ಆದರೆ ನಮ್ಮ ರಾಜಕಾರಣಿಗಳು ಅಂಗಿ-ಪ್ಯಾಂಟ್ ಕಳಚಿ ತಲೆ ತಗ್ಗಿಸಿ, ನಡುಬಗ್ಗಿಸಿ ಸಮೀರ್ ಎಂಬ ಹುಡುಗ ವರ್ಣಿಸಿರುವ “ಗೌಡ” ರ ಕಾಲಿಗೆ ಬೀಳುವುದು ಯಾಕೆ ಎನ್ನುವುದು ನಿಗೂಢವಾದ ಪ್ರಶ್ನೆ. 2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಈ’ ‘’ಗೌಡ’’ರ ಜಾತಿ ಜನರ ಸಂಖ್ಯೆ- 4,40,280. ಯಾವ ಅಭ್ಯರ್ಥಿಯನ್ನೂ ಸೋಲಿಸುವ ಇಲ್ಲವೇ ಗೆಲ್ಲಿಸುವ ಶಕ್ತಿ ಇವರಿಗಿಲ್ಲ. ಆದ್ದರಿಂದ ಮತಗಳಿಗಾಗಿ ಓಲೈಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಹೋಗ್ಲಿಬಿಡಿ, ಈ ‘’ಗೌಡರು’’ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ದುಡ್ಡನ್ನಾದರೂ ಕೊಡ್ತಾರಾ? ಅದೂ ಇಲ್ಲ. ಅವರದ್ದೇನಿದ್ದರೂ ಇನ್ ಕಮಿಂಗ್ ಕಾಲ್, ಔಟ್ ಗೋಯಿಂಗ್ ಇಲ್ಲ. ಅವರಲ್ಲಿಗೆ ಹೋದವರು ಹುಂಡಿ ತುಂಬಿ ಬರಬೇಕು. ಇಂತಹ “ಗೌಡರ’’ ಕಾಲಿಗೆ ಬೀಳಲು ಮತ್ತು ಅವರನ್ನು ಬೆಂಬಲಿಸಲು ಬಿಜೆಪಿ ನಾಯಕರಿಗಾದರೂ ಕಾರಣಗಳಿವೆ. ಮೊದಲನೆಯದಾಗಿ ಸೈದ್ದಾಂತಿಕವಾದ ಸಹಮತ, ಎರಡನೆಯದಾಗಿ ಅವರಲ್ಲಿರುವ ಸಣ್ಣ ಸಂಖ್ಯೆಯ ಮತದಾರರಲ್ಲಿ ಶೇಕಡಾ 95ರಷ್ಟು ಮಂದಿ ಅವರದ್ದೇ ಪಕ್ಷದ ಬೆಂಬಲಿಗರು.
ಕಾಂಗ್ರೆಸ್ ನಾಯಕರಿಗೆ ಅತ್ತ ಮತಗಳೂ ಇಲ್ಲ, ಇತ್ತ ದುಡ್ಡೂ ಇಲ್ಲ. ಹೀಗಿದ್ದರೂ ಯಾಕೆ ಅಲ್ಲಿಗೆ ಹೋಗಿ ಅಡ್ಡಬೀಳುತ್ತಾರೆ? ಆಯ್ತು ಮತನೂ ಇಲ್ಲ, ದುಡ್ಡುನೂ ಇಲ್ಲ ಹಾಗಿದ್ದರೆ ಇದು ಭಕ್ತಿಯೇ? ಭಕ್ತಿಯಾಗಿದ್ದರೆ ದೇವರಿಗೆ ಕೈಮುಗಿಯಬೇಕು. ದೇವಸ್ಥಾನದ ಮಾಲೀಕರಿಗೆ ಯಾಕೆ? ವ್ಯಕ್ತಿತ್ವಕ್ಕೆ ಕೊಡುವ ಗೌರವವೇ? ನೆಲದ ಕಾನೂನನ್ನು ಸರಿಯಾಗಿ ಕೆಲಸ ಮಾಡಲು ಬಿಟ್ಟಿದ್ದರೆ ನಡೆದಾಡುವ ದೇವರು ಎಲ್ಲಿರುತ್ತಿದ್ದರೋ ಗೊತ್ತಿಲ್ಲ. ಅಜ್ಞಾನವೇ? ಅಲ್ಲಿ ನಡೆದಿರುವ ಕೊಲೆ, ಅಪಹರಣ, ಅತ್ಯಾಚಾರಗಳ ಸುದ್ದಿಗಳ ಮಹಾಪೂರವೇ ಹರಿದುಬಂದಿದೆ? ಹೀಗಿದ್ದರೂ ಯಾಕೆ ಈ ಶರಣಾಗತಿ? ಈ ಪ್ರಶ್ನೆಗೆ ಯಾರಿಗಾದರೂ ಉತ್ತರ ಗೊತ್ತಿದ್ದರೆ ತಿಳಿಸಿ.
ಈ ‘’ಗೌಡರು’’ ನಮ್ಮ ಗುರುಗಳಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರಿಗೂ ಆತ್ಮೀಯರಾಗಿದ್ದರು. ಮುಂಗಾರು ಪತ್ರಿಕೆಯಲ್ಲಿ ನಡೆದಿದ್ದ ಮೊದಲ ಘಟಸ್ಪೋಟಕ್ಕೆ ಈ ಸ್ನೇಹ ಕೂಡಾ ಒಂದು ಕಾರಣವಾಗಿತ್ತು. ಈ ಬಗ್ಗೆ ಒಮ್ಮೆ ನಾನು ವಡ್ಡರ್ಸೆಯವರನ್ನು ಕೇಳಿದ್ದೆ. ‘’ಅವರು ದೇವರಾಜ ಅರಸು ಅವರಿಗೆ ಆತ್ಮೀಯರಾಗಿದ್ದರು ಗೊತ್ತಾ?’’ ಎಂದು ಹೇಳಿ ಏನೇನೋ ಕತೆ ಹೇಳಿದ್ದರು.
ಹೀಗಿದ್ದರೂ 1987ರಲ್ಲಿ ಸಿಪಿಎಂ ನಾಯಕರ ಮಗಳು ಪದ್ಮಲತಾ ನಿಗೂಢ ಸಾವಿನ ಬಗ್ಗೆ ವರದಿ ಮಾಡಿದ್ದಕ್ಕಾಗಿ ಮುಂಗಾರು ಪತ್ರಿಕೆಯ ಮೇಲೆ “ಊರ ಗೌಡರು’’ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಅದರ ನಂತರ ವಡ್ಡರ್ಸೆಯವರಿಗೂ ನಿಧಾನವಾಗಿ ಜ್ಞಾನೋದಯವಾಗುತ್ತಾ ಬಂದಿತ್ತು.
ಈ ‘’ಗೌಡರು’’ ಯಾರೆಂದು ಗೊತ್ತಾಯಿತಲ್ಲಾ, ಏನ್ ಗುರು, ಸಮೀರ್ ವಿಡಿಯೋ ನೋಡಿಲ್ವಾ?
ಕೃಪೆ: facebook, ಬರಹ: ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು