ಮಂಗಳೂರು: ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ನಾಲ್ಕೈದು ವರ್ಷಗಳಿಂದ ಆಂತರಿಕ ಸಂಪನ್ಮೂಲ ಸಂಪೂರ್ಣವಾಗಿ ಬರಿದಾಗಿದ್ದು, ಅಧೋಗತಿಗೆ ತಲುಪಿತ್ತು. ಈ ಮಧ್ಯೆ ಕುಲಪತಿ ಫ್ರೊ.ಪಿ.ಎಲ್.ಧರ್ಮ ಅವರು ಆರ್ಥಿಕ ಸ್ಥಿತಿಗತಿ ಹಾಗೂ ಶೈಕ್ಷಣಿಕ ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರುವಲ್ಲಿ ನಡೆಸಿರುವ ಪ್ರಯತ್ನ ಶ್ಲಾಘನೀಯ.
ಆರ್ಥಿಕ ಸಂಕಷ್ಟದಿಂದ ನಿವೃತ್ತಿಯಾಗಿರುವ ಪ್ರಾಧ್ಯಾಪಕರಿಗೆ ಪಿಂಚಣಿ ವೇತನ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿವೃತ್ತರಾದವರಿಗೆ ಪಿಂಚಣಿ ನೀಡಲು 24 ಕೋ.ರೂ. ಗಳನ್ನು ನೀಡುವಂತೆ ವಿಶ್ವವಿದ್ಯಾಲಯ ಸರಕಾರವನ್ನು ಕೋರಿತ್ತು. ಈ ನಡುವೆ ಕುಲಪತಿ ಫ್ರೊ.ಪಿ.ಎಲ್.ಧರ್ಮ ಅವರು ಹಲವು ತಿಂಗಳಿನಿಂದ ಅನಗತ್ಯ ಖರ್ಚು ವೆಚ್ಚಗಳಿಗೆ ತಡೆ ಹಾಕಿದ ಫಲವಾಗಿ ರಾಜ್ಯ ಸರಕಾರವು 11.03 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ.
“ಅಧಿಕಾರ ದುರುಪಯೋಗದ ಆರೋಪ ಹೊತ್ತುಕೊಂಡಿರುವ ಹಿಂದಿನ ಅಧಿಕಾರಿ ವರ್ಗ ಹಾಗೂ ಹಿಂದಿನ ಕುಲಪತಿಗಳ ಒಂದು ದಶಕಗಳ ಆಡಳಿತದ ಬಳಿಕ ವಿ.ವಿ ಯ ದುಂದುವೆಚ್ಚಗಳನ್ನೆಲ್ಲಾ ಕಡಿತ ಗೊಳಿಸಿ ಸರ್ಕಾರದ ಮುಂದೆ ಉಪಯೋಗದ ವರದಿಯನ್ನು ಸಲ್ಲಿಸಿದರ ಫಲವಾಗಿ ಉಪನ್ಯಾಸಕರ ಪಿಂಚಣಿ ಹಣವನ್ನು ಸರ್ಕಾರ ಬಿಡುಗಡೆ ಗೊಳಿಸಲು ಮನಸ್ಸು ಮಾಡಿದೆ. ವಿ.ವಿ ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕುಲಪತಿಯ ಅಧಿಕಾರ ಸ್ವೀಕರಿಸಿದ ಫ್ರೊ.ಪಿ.ಎಲ್.ಧರ್ಮ ರವರು ಆರ್ಥಿಕ ಸ್ಥಿತಿಗತಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ನಡೆಸಿರುವ ಪ್ರಯತ್ನ ನಿಜವಾಗಿಯೂ” ಶ್ಲಾಘನೀಯ ಎಂದು ಸಿಂಡಿಕೇಟ್ ಸದಸ್ಯರೋರ್ವರು ತಿಳಿಸಿದ್ದಾರೆ.
“ತಿಂಗಳುಗಟ್ಟಲೆ ಸಂಬಳಕ್ಕಾಗಿ ಕಾಯುತ್ತಿದ್ದ ಅತಿಥಿ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗಗಳ ಸಂಬಳವನ್ನು ಯಥಾಸ್ಥಿತಿಗೆ ತರುವಲ್ಲಿ ಕುಲಪತಿ ಹಾಗೂ ಕುಲಸಚಿವರ ಪಾತ್ರ ಅತ್ಯಂತ ಮಹತ್ವದ್ದು. ಇಷ್ಟೊಂದು ಆರ್ಥಿಕ ಸಮಸ್ಯೆಗಳಿದ್ದರೂ ಕೂಡ ಯಾರೊಬ್ಬರ ಸಂಬಳವನ್ನು ಕಡಿತ ಗೊಳಿಸದೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಕುಲಪತಿ ಫ್ರೊ.ಪಿ.ಎಲ್.ಧರ್ಮ ಅವರು ಪ್ರಯತ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಅರ್ಥಿಕ ಗುಣಮಟ್ಟ ಸುಧಾರಿಸಲು ಸರ್ಕಾರ ಮುಂದಾದಲ್ಲಿ ಮತ್ತೊಮ್ಮೆ ಮಂಗಳೂರು ವಿ.ವಿ ಯ ಶೈಕ್ಷಣಿಕ ಪ್ರಗತಿಯ ಗತವೈಭವ ಮರುಕಳುಸಲು ಸಾಧ್ಯವಿದೆ” ಎಂದು ಮತ್ತೋರ್ವ ಸಿಂಡಿಕೇಟ್ ಸದಸ್ಯ ರಘುರಾಜ್ ಕದ್ರಿ ಅಭಿಪ್ರಾಯಿಸಿದ್ದಾರೆ.