ಉಡುಪಿ: ನಕ್ಸಲ್ ನಿಗ್ರಹ ಪಡೆಯ ಎನ್ ಕೌಂಟರ್ ಗೆ ಬಲಿಯಾದ ನಕ್ಸಲ್ ವಿಕ್ರಂ ಗೌಡ ಅವರ ಅಂತ್ಯಸಂಸ್ಕಾರ ಹುಟ್ಟೂರಾದ ಹೆಬ್ರಿ ತಾಲ್ಲೂಕಿನ ಕೂಡ್ಲುವಿನಲ್ಲಿ ಬುಧವಾರ ನೆರವೇರಿತು.
ಕೂಡ್ಲುವಿನಲ್ಲಿ ವಿಕ್ರಂ ಗೌಡ ಅವರ ಮೂಲಮನೆ ಇದ್ದು, ಇದೀಗ ತಂಗಿ ಮೂಲ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಇಲ್ಲಿ ಯಾರೂ ವಾಸವಾಗಿಲ್ಲ. ತಂಗಿ ಮತ್ತು ತಮ್ಮ ಮನೆಯ ಆವರಣದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಂತ್ಯಕ್ರಿಯೆ ವೇಳೆ ಸಮೀಪದ ಬಂಧುಗಳು, ಪೊಲೀಸರು, ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯಿಂದ ಸುಮಾರು 15 ಕಿ.ಮೀ. ದೂರ ದುರ್ಗಮ ಕಾಡಿನ ಮಧ್ಯೆ ಇರುವ ಪೀತಬೈಲು ಎಂಬಲ್ಲಿ ನಕ್ಸಲ್ ನಾಯಕ, ಹೆಬ್ರಿ ಕೂಡ್ಲು ಮೂಲದ ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್(46)ನನ್ನು ನಕ್ಸಲ್ ನಿಗ್ರಹ ಪಡೆಯು ಸೋಮವಾರ ರಾತ್ರಿ ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿದೆ.
ಕಳೆದ 15ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಿಕ್ರಂ ಗೌಡ, ನಕ್ಸಲೀಯರ ಕಬಿನಿ-2 ತಂಡವನ್ನು ಮುನ್ನೆಡೆಸುತ್ತಿದ್ದು, ಬಳಿಕ ಆತ ಕೇರಳ ರಾಜ್ಯದಲ್ಲಿ ಸಕ್ರಿಯನಾಗಿರುವ ಬಗ್ಗೆ ತಿಳಿದು ಬಂದಿದೆ. ಎಎನ್‌ಎಫ್ ತಂಡವು ಎರಡು ದಿನಗಳಿಂದ ಪೀತಬೈಲಿನಲ್ಲಿ ನಕ್ಸಲೀಯರಿಗಾಗಿ ಹೊಂಚು ಹಾಕಿ ಕುಳಿತಿತ್ತು. ಸೋಮವಾರ ರಾತ್ರಿ ಆತ ಹಾಗೂ ಆತನ ತಂಡ ಪೀತ್‌ಬೈಲಿನ ಮನೆಗೆ ದಿನಸಿ ಕೊಂಡೊಯ್ಯಲು ಬರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ವೇಳೆ ವಿಕ್ರಂ ಗೌಡ ಹಾಗೂ ತಂಡ ಮನೆಯೊಳಗೆ ಸೇರಿಕೊಂಡರು. ಈ ಸಂದರ್ಭ ಪರಸ್ಪರ ನಡೆದ ಗುಂಡಿನ ದಾಳಿಯಲ್ಲಿ ವಿಕ್ರಂ ಗೌಡ ಮೃತಪಟ್ಟಿದ್ದು, ಉಳಿದವರು ಪರಾರಿಯಾಗಿದ್ದಾರೆ.
ಮೃತ ವಿಕ್ರಂ ಗೌಡ ನಾಡ್ಪಾಲು ಗ್ರಾಪಂ ವ್ಯಾಪ್ತಿಯ ಹೆಬ್ರಿಯಿಂದ ಸುಮಾರು 20 ಕಿ.ಮೀ. ದೂರದ ಸೋಮೇಶ್ವರ ಅಭಯಾರಣ್ಯದಲ್ಲಿರುವ ಕೂಡ್ಲು ಗ್ರಾಮದ ನಿವಾಸಿ ದಿವಂಗತ ವೆಂಕಯ್ಯ ಗೌಡ ಹಾಗೂ ದಿವಂಗತ ಗುಲಾಬಿ ದಂಪತಿ ಪುತ್ರ. ನಾಲ್ಕನೇ ತರಗತಿಯವರೆಗೆ ಹೆಬ್ರಿಯಲ್ಲಿ ವಸತಿ ಶಾಲಾ ಶಿಕ್ಷಣ ಪಡೆದ ವಿಕ್ರಂ ಬಳಿಕ ಹೆಬ್ರಿ ಶ್ರೀಗಣೇಶ್ ಹೊಟೇಲ್ನಲ್ಲಿ ಕೆಲಸಕ್ಕೆ ಸೇರಿಕೊಂಡನು. ನಂತರ ತನ್ನ ಮನೆಯ ಅಡಿಕೆ ತೋಟವನ್ನು ನೋಡಿಕೊಂಡಿದ್ದನು. ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಂಪಿನಲ್ಲಿಯೂ ಕೆಲಸ ಮಾಡಿಕೊಂಡಿದ್ದ. ಮುಂದೆ ಅರಣ್ಯ ಇಲಾಖೆಯ ದೌರ್ಜನ್ಯ ಹಾಗೂ ಸರಕಾರದ ನೀತಿ ವಿರುದ್ಧ ವಿಕ್ರಂ ಗೌಡ ಕರ್ನಾಟಕ ವಿಮೋಚನಾ ರಂಗದೊಂದಿಗೆ ಸೇರಿ ಪ್ರತಿಭಟನೆ, ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ ಎನ್ನಲಾಗಿದೆ.
ಕ್ರಮೇಣ ಈತ ನಕ್ಸಲ್ ಸಿದ್ಧಾಂತಕ್ಕೆ ಮಾರು ಹೋದ ಸುಮಾರು 20 ವರ್ಷಗಳ ಹಿಂದೆ ಶಸ್ತ್ರಾಸ್ತ್ರ ಹೋರಾಟಕ್ಕೆ ಇಳಿದಿದ್ದನು. ಅದರ ಬಳಿಕ ಎರಡು ಮೂರು ಬಾರಿ ತನ್ನ ಗ್ರಾಮಕ್ಕೆ ಬಂದಿದ್ದ ವಿಕ್ರಂ ಗೌಡ ಬಳಿಕ ನಾಪತ್ತೆಯಾಗಿದ್ದನು. ಇದೀಗ ಬರೋಬರಿ 15 ವರ್ಷಗಳ ಬಳಿಕ ಆತನ ತನ್ನ ಮನೆಯಿಂದ ಕೇವಲ ಏಳೆಂಟು ಕಿ.ಮೀ. ದೂರದಲ್ಲಿನ ನಾಡ್ಪಾಲು ಗ್ರಾಮದ ಪೀತ್‌ಬೈಲು ಎಂಬಲ್ಲಿ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.
ವಿಕ್ರಂ ಗೌಡ ವಿರುದ್ಧ 61 ಪ್ರಕರಣಗಳು: ವಿಕ್ರಂ ಗೌಡ ವಿರುದ್ಧ ಕೊಲೆ ಸುಲಿಗೆ ಸಂಬಂಧ ಕರ್ನಾಟಕದಲ್ಲಿ 42 ಮತ್ತು ಕೇರಳದಲ್ಲಿ 19 ಸೇರಿದಂತೆ ಒಟ್ಟು 61 ಪ್ರಕರಣ ಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದರಲ್ಲಿ ಮುಖ್ಯವಾಗಿ 2008ರ ಮೇ.15ರಂದು ಹೆಬ್ರಿ ಸಮೀಪದ ಸೀತಾನದಿ ಬಳಿ ನಡೆದ ಶಿಕ್ಷಕ ಭೋಜ ಶೆಟ್ಟಿ ಹಾಗೂ ಆತನ ಗೆಳೆಯ ಕೃಷಿಕ ಸುರೇಶ್ ಶೆಟ್ಟಿ ಹತ್ಯೆ, 2011ರ ಡಿ.28ರಂದು ತೆಂಗಿನಮಾರುವಿನಲ್ಲಿ ನಡೆದ ಸದಾಶಿವ ಗೌಡನ ಹತ್ಯೆ ಪ್ರಕರಣ ಹಾಗೂ 2005ರ ಜು.28ರಂದು ಕಬ್ಬಿನಾಲೆ ಗ್ರಾಮದ ಮತ್ತಾವು ಕ್ರಾಸ್ ಬಳಿ ನೆಲಬಾಂಬ್ ಸ್ಫೋಟಿಸಿ ಪೊಲೀಸ್ ಜೀಪಗಳಿಗೆ ಹಾನಿ ಹಾಗೂ 14ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ಗಾಯಗೊಳಿಸಿದ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳಲ್ಲಿ ಈತ ತಲೆಮರೆಸಿ ಕೊಂಡಿದ್ದ ಮೋಸ್ಟ್ ವಾಂಟೆಡ್ ಆರೋಪಿ ಎಂಬುದಾಗಿ ಪೊಲೀಸರು ಘೋಷಿಸಿದ್ದರು.