ಚನ್ನಪಟ್ಟಣ: “ಕುಮಾರಸ್ವಾಮಿಯವರನ್ನು ನಾನು ಪ್ರೀತಿಯಿಂದ ಕರಿಯಣ್ಣ ಅಂತಾನೇ ಕರೆಯೋದು. ಅವರು ನನ್ನನ್ನು ಕುಳ್ಳ ಅಂತಿದ್ರು” ಎಂದು ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ಆಗಿನಿಂದಲೂ ಕುಮಾರಸ್ವಾಮಿ ಅವರನ್ನು ಪ್ರೀತಿಯಿಂದ ಕರಿಯಣ್ಣ ಅಂತಲೇ ಕರೆಯೋದು. ನಾನು ಮುಂಚೆಯಿಂದಲೂ ಹಾಗೆಯೇ ಕರೆಯುವುದು. ಕುಳ್ಳಗಿರುವ ನನ್ನನ್ನು ಅವರು ಯಾವಾಗಲೂ ‘ಕುಳ್ಳ’ ಎನ್ನುತ್ತಾರೆ. ಹಾಗಾಗಿ, ನಿನ್ನೆ ಭಾಷಣ ಮಾಡುವಾಗ ಅವರನ್ನು ಕರಿಯಣ್ಣ ಎಂದಿದ್ದೇನೆಯೇ ಹೊರತು, ಬಣ್ಣದ ಆಧಾರದ ಮೇಲೆ ಜನಾಂಗೀಯ ನಿಂದನೆ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದರು.
“ಮುಂಚೆಯಿಂದಲೂ ಕರೆಯುವುದರಿಂದ ಆಟೋಮೆಟಿಕ್ ಆಗಿ ಆ ಪದ ಬಂತು. ಮುಂಚೆಯಿಂದಲೂ ಅವರನ್ನು ಹಾಗೆಯೇ ಕರೆದು ಅಭ್ಯಾಸವಿರುವುದರಿಂದ, ನಿನ್ನೆಯ ಭಾಷಣದಲ್ಲೂ ಹಾಗೆಯೇ ಕರೆದಿರುವೆ. ನಾವಿಬ್ಬರು ಬೇರೆ ಪಕ್ಷದಲ್ಲಿದ್ದರೂ ನಮ್ಮ ಸ್ನೇಹ ಅಳಿಯುವುದ್ದಿಲ್ಲ. ಹಳೆಯದ್ದನ್ನು ಮರೆಯುವುದಕ್ಕೆ ಆಗುವುದಿಲ್ಲ. ನಾನೀಗ ಕಾಂಗ್ರೆಸ್‌ನಲ್ಲಿದ್ದರೂ, ನನ್ನ ರಾಜಕೀಯ ಗುರು ಎಚ್.ಡಿ. ದೇವೇಗೌಡರು” ಎಂದು ಹೇಳಿದರು.
“ನಮ್ಮ ಸಮಾಜವು ಖರೀದಿ ಮಾಡುವ ಸಮಾಜವಲ್ಲ. ಹಾಗಾಗಿ, ನಮ್ಮ ಸಮಾಜವನ್ನು ಖರೀದಿ ಮಾಡಲು ಆಗಲ್ಲ ಅಂದಿದ್ದೇನೆ” ಎಂದು ಎಚ್.ಡಿ.ಕೆ ಕುರಿತಾಗಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಜಮೀರ್ ಖಾನ್ ಪ್ರತಿಕ್ರಿಯಿಸಿದರು.
.