ರಾಜಸ್ಥಾನ: ಹಣ ಹೂಡಿಕೆ ಮಾಡುವಂತೆ ನಂಬಿಸಿ ಸೋಷಿಯಲ್ ಮೀಡಿಯಾ ಬಳಕೆದಾರರಿಂದ 42 ಲಕ್ಷ ರೂ. ವಂಚಿಸಿರುವ ಆರೋಪದ ಮೇರೆಗೆ 19ನೇ ವರ್ಷದ ಯುವಕನನ್ನು ಅಜ್ಮೀರ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವಕನನ್ನು 11ನೇ ತರಗತಿ ಓದುತ್ತಿರುವ ಕಾಶಿಫ್ ಮಿರ್ಝಾ ಎಂದು ಗುರುತಿಸಲಾಗಿದೆ.
ಆರೋಪಿ ಇನ್ಸ್ಟಾಗ್ರಾಮ್ ನಲ್ಲಿ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾ ಇನ್‌ಪ್ಯೂಯೆನ್ಸರ್ ಆಗಿದ್ದ. ಹೀಗಾಗಿ ಜನರನ್ನು ಸರಳವಾಗಿ ಮರಳು ಮಾಡುತ್ತಿದ್ದ. ನೀವು ಹಣ ಹೂಡಿದರೆ ಹೆಚ್ಚು ಲಾಭ ಮಾಡುತ್ತೀರಿ ಎಂದು ಜನರನ್ನು ನಂಬಿಸಿ ಹಣ ವಂಚನೆಗೆ ಇಳಿದಿದ್ದ.
ಪೊಲೀಸರು ಹೇಳುವ ಪ್ರಕಾರ, ₹ 1,39,999 ರೂಪಾಯಿ ಹೂಡಿಕೆ ಮಾಡಿದ್ರೆ, 13 ವಾರಗಳಲ್ಲಿ ಅದು 99 ಲಕ್ಷ 99 ಸಾವಿರ ಆಗಲಿದೆ ಎಂದು ಇನ್ಸ್ಟಾಗ್ರಾಮ್ ಬಳಕೆದಾರರನ್ನು ನಂಬಿಸಿದ್ದ. ಆರಂಭದಲ್ಲಿ ಕೆಲವರಿಗೆ ಲಾಭ ನೀಡಿದಂತೆ ಮಾಡಿದ ಮಿರ್ಜಾ ಹೆಚ್ಚು ಹೆಚ್ಚು ಜನರನ್ನು ತನ್ನತ್ತ ಬರುವಂತೆ ಮಾಡಿಕೊಂಡಿದ್ದಾನೆ. ಕೊನೆಗೆ 200 ಜನರಿಂದ 42 ಲಕ್ಷ ರೂ. ಹಣ ವಸೂಲಿ ಮಾಡಿ ಎಸ್ಕೆಪ್ ಆಗಿದ್ದ.
ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ಅಜ್ಮೀರ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಕ್ಯಾಶ್ ಕೌಂಟಿಂಗ್ ಮಷಿನ್, ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಗಳನ್ನು ವಶಕ್ಕೆ ಪಡೆದಿದ್ದಾರೆ.