ಅಡ್ಡೂರು: ಶುಕ್ರವಾರ ಉದ್ಘಾಟನೆಗೊಂಡಿರುವ ಕಾಂಜಿಲಕೋಡಿಯ ನವೀಕೃತ ಬದ್ರುಲ್ ಹುದಾ ಜುಮಾ ಮಸೀದಿಗೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ರವಿವಾರ ಮಧ್ಯಾಹ್ನ ಭೇಟಿ ನೀಡಿದರು
ಬಳಿಕ ಮಾತನಾಡಿದ ಸಯ್ಯಿದರು, “ಅಲ್ಲಾಹನು ಪ್ರತೀ ಮಾಸಗಳನ್ನು ಪ್ರತ್ಯೇಕಿಸಿದ್ದಾನೆ. ಒಂದೊಂದು ಮಾಸಕ್ಕೂ(ತಿಂಗಳಿಗೆ) ಅದರದ್ದೇ ಆದ ಮಹತ್ವ ನೀಡಿದ್ದಾನೆ. ‘ರಮಳಾನ್’ ಮಾಸಗಳ ಪೈಕಿ ಅತೀ ಶ್ರೇಷ್ಠವಾದ ಮಾಸವಾಗಿದೆ. ನಮ್ಮನ್ನು ರಮಳಾನ್ ಗೆ ಅಣಿಗೊಳಿಸುವ ಸಲುವಾಗಿ ರಜಬ್, ಶಹಬಾನ್ ಮಾಸಗಳಲ್ಲಿ ಆರಾಧನೆಯನ್ನು ವೃದ್ಧಿಗೊಳಿಸುತ್ತಿರಬೇಕು. ನಂತರ ರಮಳಾನ್ ಮಾಸದಲ್ಲಿ ಆರಾಧನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಆರಾಧನೆಯನ್ನು ಹೆಚ್ಚುಗೊಳಿಸುತ್ತಾ ಅಲ್ಲಾಹನನ್ನು ಸಂತೃಪ್ತಿಗೊಳಿಸಲು ಪ್ರಯತ್ನಿಸಬೇಕು” ಎಂದು ಹೇಳಿದರು.
“ಎಲ್ಲಾ ಕೆಡುಕುಗಳಿಂದ ದೂರವಿದ್ದು, ಹೃದಯ ಶುದ್ಧಿಗೊಳಿಸುವ ಮುಖಾಂತರ ಅಲ್ಲಾಹನ ಕಡೆಗೆ ಮರುಳುವ ಮುನ್ನ ಆರಾಧನೆಯಲ್ಲಿ ಮಗ್ನರಾಗಲು ಶ್ರಮಿಸಬೇಕು. ಮುಂದಿನ ರಮಳಾನ್ ವರೆಗೂ ಆತ್ಮಶುದ್ಧಿಗೆ ಕೇಡು ಬಾರದಂತೆ ಶರೀರವನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು. ಇದು ಮುಅ್ ಮಿನ್(ವಿಶ್ವಾಸಿ)ಗಳ ಪ್ರಮುಖ ಗುಣ” ಎಂದು ಪ್ರತಿಪಾದಿಸಿದರು.
ಈ ಸಂದರ್ಭ ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿಯ ಖತೀಬ್ ಯಾಕೂಬ್ ಫೈಝಿ, ಮಸೀದಿಯ ಅಧ್ಯಕ್ಷ ಮಹಮ್ಮದ್ ಝಕರಿಯಾ ಕೋಡಿಬೆಟ್ಟು, ಬಿ.ಎಚ್.ಜೆ.ಎಂ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಎಂ.ಎಚ್.ಮುಹಿಯುದ್ದೀನ್, ಜಮಾಅತ್ ಕಾರ್ಯದರ್ಶಿಗಾಳದ ಶರೀಫ್ ಪೊನ್ನೆಲ, ನೌಫಲ್ ಕೋಡಿಬೆಟ್ಟು, ಪ್ರಮುಖರಾದ ಇಬ್ರಾಹೀಂ ಬೊಟ್ಟಿಕೆರೆ, ಲತೀಫ್ ಸಿ.ಎಂ, ಎ.ಕೆ.ರಿಯಾಝ್, ಇಕ್ಬಾಲ್, ಮೊಹಮ್ಮದ್ ಕುಂಞಿ ಮಾಸ್ಟರ್, ಮೊಹಮ್ಮದ್ ಶಮೀರ್ ನೂಯಿ, ಹಸನ್ ಪೊನ್ನೆಲ, ಎ.ಕೆ.ಮುಸ್ತಫಾ, ಶಾಹುಲ್ ಹಮೀದ್ ನೂಯಿ, ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ತಫಾ ಹನೀಫಿ, ಶರೀಫ್ ಅರ್ಶದಿ ಮತ್ತಿತರರು ಉಪಸ್ಥಿತರಿದ್ದರು.



