ಕೊಲೊಂಬೊ: ಭಾರತ ಮೂಲದ ಬಹುಕೋಟಿ ಒಡೆಯ ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಸಮೂಹದ ವಿರುದ್ಧ ಅಮೆರಿಕದಲ್ಲಿ ನಡೆಯುತ್ತಿರುವ ವಿಚಾರಣೆ ಬೆನ್ನಲ್ಲೇ ತನ್ನ ದೇಶದಲ್ಲಿ ಅದಾನಿ ಹೂಡಿಕೆಯ ಯೋಜನೆಗಳ ಕುರಿತು ಶ್ರೀಲಂಕಾ ಸರ್ಕಾರ ತನಿಖೆಗೆ ಆದೇಶಿಸಿದೆ.
“ಅಧ್ಯಕ್ಷ ಅನುರಾ ದಿಸ್ಸನಾಯಕೆ ಅವರು ನಡೆಸಿದ ಮೊದಲ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಅದಾನಿ ಹೂಡಿಕೆ ಕುರಿತು ಎರಡು ತನಿಖೆಗಳು ನಡೆಯಲಿವೆ. ಇವುಗಳು ನೀಡುವ ವರದಿಯನ್ನು ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ” ಎಂದು ಸರ್ಕಾರದ ವಕ್ತಾರ ನಳಿಂದಾ ಜಯತಿಸ್ಸಾ ತಿಳಿಸಿದ್ದಾರೆ.
“ಭಾರತ ಮೂಲದ ಅದಾನಿ ನಿರ್ಮಾಣ ಸಂಸ್ಥೆಯು ಶ್ರೀಲಂಕಾದಲ್ಲಿ ಹೂಡಿಕೆ ಮಾಡಿರುವ ಯೋಜನೆಗಳ ಕುರಿತು ಹಣಕಾಸು ಹಾಗೂ ವಿದೇಶಾಂಗ ಸಚಿವರು ಪರಿಶೀಲನೆ ನಡೆಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು ” ಎಂದಿದ್ದಾರೆ.
ಉದ್ಯಮಿ ಗೌತಮ್ ಅದಾನಿ ಅವರು ಭಾರತದಲ್ಲಿ ಕೈಗೊಳ್ಳಲು ಯೋಜಿಸಿರುವ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಅಧಿಕಾರಿಗಳಿಗೆ 2 ಸಾವಿರ ಕೋಟಿಯಷ್ಟು ಲಂಚ ನೀಡಿರುವುದು ಹಾಗೂ ಅಮೆರಿಕದ ಹೂಡಿಕೆದಾರರ ದಿಕ್ಕು ತಪ್ಪಿಸಲು ಸುಳ್ಳು ಹೇಳಿ ವಂಚಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕದ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿದೆ.