ಮಂಗಳೂರು: ದ.ಕ.ಜಿಲ್ಲಾ ಕ್ರಿಶ್ಚಿಯನ್ ಜನಾಂಗದ ವಿವಾಹ ನೋಂದಣಾಧಿಕಾರಿಯನ್ನಾಗಿ ಶಾಲೆಟ್ ಪಿಂಟೋ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶಿಸಿದೆ.
ಶಾಲೆಟ್ ಪಿಂಟೋ ಅವರು 1999ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, 2002ರಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ, ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿದ್ದ ತನ್ನ ಪತಿ ಜೊಸ್ಸಿ ಪಿಂಟೋ ಅವರ ಜೊತೆ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
2016ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಮಾನಾಥ ರೈ ಹಾಗೂ ಮೂಡಬಿದಿರೆ ಕ್ಷೇತ್ರದ ಸಚಿವರಾಗಿದ್ದ ಅಭಯಚಂದ್ರ ಜೈನ್ ಅವರು ಶಾಲೆಟ್ ಪಿಂಟೋ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆಯಾಗಿ ನೇಮಕ ಮಾಡಿದ್ದರು. ಹೀಗೆ ಸತತ 9 ವರುರ್ಷಗಳಿಂದ ಶಾಲೆಟ್ ಪಿಂಟೋ ಮಹಿಳಾ ಕಾಂಗ್ರೆಸ್ ನ ಸಾರಥ್ಯ ವಹಿಸಿ ಮುನ್ನಡೆಸುತ್ತಿದ್ದಾರೆ.