ವಿಟ್ಲ: ಮನೆ ಅಡಿಸ್ಥಳದ ಹಕ್ಕುಪತ್ರ ಪಡೆಯುವ ವಿಚಾರದಲ್ಲಿ ಬಿಜೆಪಿ ಮುಖಂಡ ಮತ್ತು ಆತನ ಬೆಂಬಲಿಗರು ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿ ದಾಂಧಲೆ ನಡೆಸಿರುವ ಘಟನೆ ವಿಟ್ಲ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ನಡೆದಿದೆ.
ವೀರಕಂಬ ನಿವಾಸಿಯೋರ್ವರು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಅಡಿಸ್ಥಳವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ನಿಟ್ಟಿನಲ್ಲಿ 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಕಂದಾಯ ಅಕಾರಿಗಳು ಸ್ಥಳ ತನಿಖೆಯನ್ನು ನಡೆಸಿ ವರದಿ ಸಲ್ಲಿಸುವ ಸಂದರ್ಭದಲ್ಲಿ ಮನೆ ಅರಣ್ಯ ಇಲಾಖೆಯಿಂದ ನಿರ್ದಿಷ್ಟ ದೂರದಲ್ಲಿದ್ದು, ಅಲ್ಲಿಂದ ಒಪ್ಪಿಗೆ ಪಡೆಯುವ ಬಗ್ಗೆ ಷರಾ ಬರೆದಿದ್ದಾರೆ.
ಈ ಕುರಿತಾಗಿ ಅಧಿಕಾರಿಗಳ ಜೊತೆ ಮಾತನಾಡಲು ಬಿಜೆಪಿ ಮುಖಂಡ ಮಾಧವ ಮಾವೆ ತನ್ನ ಬೆಂಬಲಿಗರ ಜತೆ ವಿಟ್ಲದ ಆರ್‌ಐ ಕಚೇರಿಗೆ ಆಗಮಿಸಿದ್ದರು. ಮಾತುಕತೆ ವೇಳೆ ಬಿಜೆಪಿ ಮುಖಂಡನ ಬೆಂಬಲಿಗರಾದ ಹರೀಶ ಮತ್ತು ಧನಂಜಯ ಆಕ್ರೋಶಿತಗೊಂಡು ಸರ್ಕಾರಿ ಅಧಿಕಾರಿಯನ್ನು ನಿಂದಿಸಿ ಮೇಜಿಗೆ ಕೈಯನ್ನು ಬಡಿದು ದಾಂಧಲೆ ನಡೆಸಿದ್ದು, ಮೇಜಿನ ಮೇಲೆ ಹಾಸಲಾಗಿದ್ದ ಗಾಜು ಪುಡಿ ಪುಡಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಬಂದೋಬಸ್ತು ಕಲ್ಪಿಸಿದ್ದಾರೆ. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಘಟನೆ ಬಗ್ಗೆ ವಿವರ ನೀಡಲಾಗಿದ್ದು, ದೂರು ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.