ಹಾವೇರಿ: ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದಡಿ ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ಮುಖಂಡರಾದ ಸಿ.ಟಿ. ರವಿ ಹಾಗೂ ಪ್ರತಾಪ್ ಸಿಂಹ ವಿರುದ್ಧ ಶಿಗ್ಗಾವಿ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಾಗಿದೆ.
ನ.4ರಂದು ಬಿಜೆಪಿ ವತಿಯಿಂದ ವಕ್ಫ್ ಆಸ್ತಿ ವಿರುದ್ಧ ಶಿಗ್ಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭ ಭಾಗವಹಿಸಿದ್ದ ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ ಹಾಗೂ ಸಿ.ಟಿ. ರವಿ ಅವರು ಎರಡು ಗುಂಪುಗಳ ನಡುವೆ ದ್ವೇಷ ಬಿತ್ತುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಭಾಷಣ ಮಾಡಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಎಸ್ಪಿ ಅಂಶುಕುಮಾರ್, “ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಇದೇ ಸಂದರ್ಭದಲ್ಲಿಯೇ, ಎರಡು ಗುಂಪುಗಳ ನಡುವೆ ದ್ವೇಷ ಉಂಟು ಮಾಡುವ ರೀತಿಯಲ್ಲಿ ಆರೋಪಿಗಳು ಭಾಷಣ ಮಾಡಿದ್ದರು. ಹೀಗಾಗಿ, ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.