ವಯನಾಡ್: ಕಾಂಗ್ರೆಸ್ ವಿಪಕ್ಷ ನಾಯಕ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಿಯಾಂಕಾ ಗಾಂಧಿ ಅವರು ತಮ್ಮ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲೇ 4,10,931 ಮತಗಳ ಭಾರೀ ಅಂತರದೊಂದಿಗೆ ಭರ್ಜರಿ ಜಯಗಳಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.
ಸದ್ಯದ ಮಾಹಿತಿ ಪ್ರಕಾರ, ಪ್ರಿಯಾಂಕಾ ಅವರು 6,22,338 ಮತಗಳನ್ನು ಪಡೆದಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ ಅವರಿಗಿಂತ 4,10,931 ಮತಗಳ ಅಂತರದಿಂದ ಮುಂದಿದ್ದಾರೆ. ಸತ್ಯನ್ ಅವರು 2,11,407 ಮತಗಳನ್ನು ಹಾಗೂ ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಅವರು 1,09,939 ಮತಗಳನ್ನು ಪಡೆದಿದ್ದಾರೆ. ವಯನಾಡು ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದರು.
ಅಣ್ಣನ ದಾಖಲೆ ಮುರಿದ ಪ್ರಿಯಾಂಕಾ ಗಾಂಧಿ: 2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಈ ಕ್ಷೇತ್ರದಿಂದ 3.5 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಇದೀಗ ಅಣ್ಣನ ಸ್ಥಾನದಲ್ಲಿ ನಿಂತ ಸಹೋದರಿ ಪ್ರಿಯಾಂಕಾ ಗಾಂಧಿ ಭರ್ಜರಿ ಮತಗಳನ್ನು ಪಡೆಯುವುದರೊಂದಿಗೆ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಆ ಮೂಲಕ ಸತತ ಮುನ್ನಡೆಯೊಂದಿಗೆ ಪ್ರಿಯಾಂಕಾ ಗಾಂಧಿ ಅವರು ಈ ಹಿಂದೆ ತಮ್ಮ ಸಹೋದರ ರಾಹುಲ್ ಗಾಂಧಿ ಹೊಂದಿದ್ದ ಸ್ಥಾನವನ್ನು ನಿರಾತಂಕವಾಗಿ ಉಳಿಸಿಕೊಂಡಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಯನಾಡ್ ಹಾಗೂ ರಾಯ್ ಬರೇಲಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಕಾರಣ, ವಯನಾಡು ಕ್ಷೇತ್ರ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಅಣ್ಣ ರಾಹುಲ್ ಗಾಂಧಿಯವರ ಸೂಚನೆ ಮೇರೆಗೆ ಪ್ರಿಯಾಂಕಾ ಗಾಂಧಿ ಅವರು ವಯನಾಡ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. ಆ ಮೂಲಕ ಅವರು ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದರು.