ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಓದಿರಲಿಕ್ಕಿಲ್ಲ ಎಂಬುದು ನನಗೆ ಗ್ಯಾರಂಟಿ ಇದೆ. ಅವರು ಸಂವಿಧಾನ ಓದಿದ್ದರೆ ಅಲ್ಲಿ ಬರೆದಿರುವುದನ್ನು ಗೌರವಿಸುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಮಹಾರಾಷ್ಟ್ರದ ಗೋಂಧಿಯಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ನಮ್ಮ ಸಂವಿಧಾನದಲ್ಲಿ ಫುಲೆ ಜೀ, ಬಾಬಾ ಸಾಹೇಬ್ ಅಂಬೇಡ್ಕರ್, ಭಗವಾನ್ ಬುದ್ಧ, ಬಸವಣ್ಣ, ನಾರಾಯಣ ಗುರು, ಛತ್ರಪತಿ ಶಿವಾಜಿ ಮಹಾರಾಜ ಅವರ ಚಿಂತನೆಗಳಿವೆ. ಸಂವಿಧಾನದಲ್ಲಿ ಏಕತೆ, ಪ್ರೀತಿ, ಸಮಾನತೆ ಇದೆ. ಎಲ್ಲ ಧರ್ಮೀಯರನ್ನು ಸಮಾನವಾಗಿ ನೋಡಿದೆ. ಅಲ್ಲಿ ದ್ವೇಷದ ಉಲ್ಲೇಖವಿಲ್ಲ. ಇದರಲ್ಲಿ ಎಲ್ಲಿಯೂ ದ್ವೇಷದ ಮಾತು ಬರೆದಿಲ್ಲ” ಎಂದು ಹೇಳಿದರು.
“ನರೇಂದ್ರ ಮೋದಿಯವರು ಮೂರು ಕರಾಳ ಕಾಯ್ದೆ ತಂದರು, ಅದರ ವಿರುದ್ಧ ದೇಶದ ರೈತರು ಎದ್ದು ನಿಂತರು. ಆದರೂ ನರೇಂದ್ರ ಮೋದಿ ಹೇಳುತ್ತಾರೆ ಈ ಮಸೂದೆ ತಂದಿದ್ದು ರೈತರ ಹಿತಕ್ಕಾಗಿ. ಈ ಮಸೂದೆ ರೈತರ ಹಿತಕ್ಕಾಗಿ ಆಗಿದ್ದರೆ ದೇಶದ ರೈತರು ಬೀದಿಗೆ ಇಳಿದಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ದ್ವೇಷದ ಗುತ್ತಿಗೆ ತೆಗೆದುಕೊಂಡಿದ್ದರೆ, ನಾವು ಪ್ರೀತಿಯ ಗುತ್ತಿಗೆ ತೆಗೆದುಕೊಳ್ಳುತ್ತೇವೆ” ಎಂದರು.
“ಚುನಾಯಿತ ಸರ್ಕಾರಗಳನ್ನು ಪದಚ್ಯುತಗೊಳಿಸುವ ಮೂಲಕ ಬಿಜೆಪಿ ಮತ್ತು ಆರೆಸ್ಸೆಸ್ ಸಂವಿಧಾನವನ್ನು ನಾಶಪಡಿಸುತ್ತಿವೆ. ಸಂವಿಧಾನದಿಂದಾಗಿ ಇಂದು ಪ್ರಜಾಪ್ರಭುತ್ವ ಉಳಿದಿದೆ. ಬಿಜೆಪಿ, ಆರೆಸ್ಸೆಸ್ ತಮ್ಮವರನ್ನೇ ಉನ್ನತ ಸಂಸ್ಥೆಗಳಿಗೆ ನೇಮಿಸಿದಾಗ ಆ ಸಂಸ್ಥೆ ದುರ್ಬಲಗೊಳ್ಳಲಿದೆ. ಇದು ಸಿದ್ಧಾಂತಗಳ ನಡುವಿನ ಹೋರಾಟ. ದ್ವೇಷವನ್ನು ಪ್ರೀತಿಯಿಂದ ಸೋಲಿಸಲು ನಡೆಯುತ್ತಿರುವ ಹೋರಾಟ” ಎಂದು ತಿಳಿಸಿದರು.
“ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ’ ಎಂದು ನಾನು ಘೋಷಣೆ ಮಾಡಿದೆ. ರಾಜಕೀಯದಿಂದ ಪ್ರೀತಿ ಎಂಬ ಪದ ಕಾಣೆಯಾಗಿದ್ದ ಕಾರಣ. ರಾಜಕೀಯದಲ್ಲಿ ದ್ವೇಷ ಮತ್ತು ಹಿಂಸೆ ಮಾತ್ರ ಹರಡಲಾಗುತ್ತಿದೆ. ಅದಕ್ಕೆ ನಾವು ಪ್ರೀತಿ ಅನ್ನೋ ಪದ ತಗೊಂಡು ಬಂದಿದ್ದು. ಪ್ರೀತಿಯಿಂದ ಮಾತ್ರ ದ್ವೇಷವನ್ನು ತೊಲಗಿಸಲು ಸಾಧ್ಯ” ಎಂದು ಪ್ರತಿಪಾದಿಸಿದರು.