ಬೆಂಗಳೂರು: ಸಂವಿಧಾನ ಬದಲಾಯಿಸಬೇಕು ಎಂದು ಪೇಜಾವರಶ್ರೀ ಹಾಗೂ ಸಂಘ ಪರಿವಾರ ನಿಷ್ಠೆಯ ಸ್ವಾಮೀಜಿಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದು ಆತಂಕಕಾರಿ ಹಾಗೂ ಕಳವಳಕಾರಿ ಮಾತ್ರವಲ್ಲ, ಸಂವಿಧಾನಕ್ಕೆ ಬೆದರಿಕೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ವಿಧಾನ ಪರಿಷತ್ ಶಾಸಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಂವಿಧಾನ ವಿರೋಧಿ ಸಂಘಟನೆ ಆರೆಸ್ಸೆಸ್ ನೂರು ವರ್ಷಕ್ಕೆ ಕಾಲಿಡುತ್ತಿರುವುದಕ್ಕೂ, ಸಂವಿಧಾನ ಬದಲಾಯಿಸಬೇಕು ಎಂದು ಪರಿವಾರ ನಿಷ್ಠೆಯ ಯತಿಗಳು ಬೀದಿಗಿಳಿದು ಮಾತಾಡುತ್ತಿರುವುದಕ್ಕೂ ಸಂಬಂಧವಿದೆ. ಇದು ಸಂಘ ಪರಿವಾರದ ನೂರು ವರ್ಷಗಳ ಸಂಭ್ರಮಾಚಾರಣೆಯ ಕಾರ್ಯಕ್ರಮದ ಗುಪ್ತ ಸೂಚಿ ಇರುವುದು ಸ್ಪಷ್ಟ” ಎಂದು ತಿಳಿಸಿದರು.
“ಪೇಜಾವರರು ಬಯಸುತ್ತಿರುವ ಗೌರವ ನೀಡುವ ವ್ಯವಸ್ಥೆಯಲ್ಲಿ ಸಾವಿರಾರು ವರ್ಷಗಳಿಂದ ದಲಿತರು-ಶೂದ್ರರು ಶ್ರೇಷ್ಠತೆಯ ವ್ಯಸನಕ್ಕೆ ತಲೆಬಾಗಬೇಕೆ? ಮಹಿಳೆಯರು ಅತ್ಯಾಚಾರಿಗಳನ್ನು ಆರಾಧಿಸಬೇಕೆನ್ನುವ ವ್ಯವಸ್ಥೆ ಇರಬೇಕೇ? ಜೀತದಾರರು, ಶ್ರಮಿಕ ವರ್ಗ ಮಾಲೀಕರ ಅಡಿಯಾಳಾಗಿರಬೇಕೆ? ನೂರಾರು ಕೋಟಿ ಜನಸಂಖ್ಯೆಯ ಭಾರತದಲ್ಲಿ ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕಲು ಸಂವಿಧಾನ ಅವಕಾಶ ನೀಡಿದೆ. ಆದರೆ ಪೇಜಾವರ ಸ್ವಾಮೀಜಿಗಳು ಯಾವ ವ್ಯವಸ್ಥೆಯಲ್ಲಿ ತಮ್ಮ ಗೌರವವನ್ನು ಬಯಸುತ್ತಿದ್ದಾರೆ ಎಂದೂ ಬಹಿರಂಗವಾಗಿ ಹೇಳಲಿ” ಎಂದು ಸವಾಲು ಹಾಕಿದರು.
“ಬುದ್ಧ, ಬಸವಾದಿ ಶಿವ ಶರಣರು, ನಾರಾಯಣ ಗುರುಗಳಂತಹ ಸಮಾಜ ಸುಧಾರಕರ ಆಶಯಗಳು ಹಾಗೂ ಗಾಂಧಿ, ನೆಹರೂ, ಬಾಬಾ ಸಾಹೇಬರಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮದಿಂದ ರಚಿತವಾಗಿರುವ “ಸರ್ವ ಧರ್ಮ, ಸಹಬಾಳ್ವೆ”ಯ ತಿರುಳಿರುವ ಸಂವಿಧಾನವನ್ನು ಬದಲಾಯಿಸುವ ಹೊರಟಿರುವ ಪೇಜಾವರರು ತಮಗೆ ಗೌರವ ನೀಡುವ ಸಂವಿಧಾನ ಯಾವುದು ಎಂದು ಮೊದಲು ಸ್ಪಷಪಡಿಸಲಿ” ಎಂದು ತಿಳಿಸಿದರು.
“ಸ್ವಾತಂತ್ರ್ಯ ಪೂರ್ವ ಭಾರತದ ತಿಹಾಸದ ಬಗ್ಗೆ ಪುರಾವೇ ಇಲ್ಲದೆ ಮಾತಾಡಿರುವ ಸ್ವಾಮೀಜಿಗಳು ಒಂದಿಷ್ಟು ಇತಿಹಾಸ ಅರಿತು ಮಾತಾಡಲಿ. ಹರಿದು ಹಂಚಿ ಹೋಗಿದ್ದ ದೇಶವನ್ನು ಒಕ್ಕೂಟ ವ್ಯವಸ್ಥೆಯನ್ನಾಗಿ ಮಾಡಿ ಭಾರತವಾಗಿಸಲು ನಮ್ಮ ಪೂರ್ವಜರ ಪರಿಶ್ರಮವನ್ನು ಅವಮಾನಿಸುವ ಹಕ್ಕೂ ಸ್ವಾಮೀಜಿಗಳಿಗಿಲ್ಲ” ಎಂದು ನುಡಿದರು.
“ಸಂವಿಧಾನದ ಬದಲಾಗಿ ಮನುಸ್ಮೃತಿ ಜಾರಿ ಮಾಡಲು ಹೊರಟಿರುವ ಸಂಘ ಪರಿವಾರದ ಹಿಡನ್ ಅಜೆಂಡಾವನ್ನೇ ಪೇಜಾವರರು ಮುಂದುವರೆಸುತ್ತಿದ್ದಾರೆ. ದಲಿತ-ಹಿಂದುಳಿದ-ಶೋಷಿತ ಸಮುದಾಯಗಳು ಸೇರಿದಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನ-ಘನತೆಯಿಂದ ಬದುಕುಬೇಕಾದ ವ್ಯವಸ್ಥೆ ಇರುವುದು ಸಂವಿಧಾನದಡಿಯಲ್ಲಿ ಮಾತ್ರ. ಸಾವಿರಾರು ವರ್ಷಗಳ ಶ್ರೇಣಿಕೃತ ವ್ಯವಸ್ಥೆಯನ್ನು ಪೋಷಿಸುತ್ತಿರುವ ಪೇಜಾವರ ಸ್ವಾಮೀಜಿಗಳಿಗೆ ಸಂವಿಧಾನದಡಿಯಲ್ಲಿ ಬದುಕುವ ಹಕ್ಕಿದೆ. ಸಮಾನತೆ ಬಿತ್ತಿದ ನಮ್ಮ ಪೂರ್ವಜರನ್ನು ಅವಮಾನಿಸುವ, ಸಂವಿಧಾನಕ್ಕೆ ದ್ರೋಹ ಬಗೆಯುವ ಹಕ್ಕಿಲ್ಲ ಎಂಬುದು ಮನವರಿಕೆಯಾಗಲಿ” ಎಂದರು.