ಮಂಗಳೂರು: ಬಿಜೆಪಿ ನಾಯಕ ಸಿ.ಟಿ. ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಡಿರುವ ಆಕ್ಷೇಪಾರ್ಹ ಮಾತು ನಾಡಿನ ಸಮಸ್ತ ಸ್ತ್ರೀ ಕುಲಕ್ಕೆ ಮಾಡಿದ ಅಪಮಾನ. ಅವರನ್ನು ವಿಧಾನ ಪರಿಷತ್ತಿನಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡೆ ಮಂಜುಳಾ ನಾಯಕ್ ಆಗ್ರಹಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರ ಆಕ್ಷೇಪಾರ್ಹ ಪದ ಬಳಕೆ ಆರೋಪ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಮಂಜುಳಾ ನಾಯಕ್, “ಸಿಟಿ ರವಿ ಅವರೇ ಹೆಣ್ಣು ಮಕ್ಕಳು ರಾಜಕೀಯದಲ್ಲಿ ಬರುವುದೇ ಅಪರೂಪ. ಅಧಿಕಾರ ಸ್ಥಾನಕ್ಕೆ ಹೋಗುವುದು ಬಹಳ ಕಷ್ಟ ಸಾಧ್ಯ. ಮಹಿಳೆಯ ವಿರುದ್ಧ ಇಂತಹ ನಿಂದನೀಯ ಮಾತುಗಳನ್ನು ಯಾವುದೇ ಸಮಾಜ ಒಪ್ಪುವುದಿಲ್ಲ. ಪ್ರಜಾಪ್ರಭುತ್ವದ ದೇವಾಲಯವೊಂದರಲ್ಲಿ ಇದೊಂದು ದೊಡ್ಡ ಘಟನೆ ನಡೆದಿದೆ. ಪರಿಷತ್ತಿನ ಕಲಾಪದಲ್ಲಿ ನಡೆದ ಈ ಘಟನೆ ಇಡೀ ನಾಗರೀಕ ಸಮಾಜ ತಲೆ ತಗಿಸುವಂತಾಗಿದ್ದು, ಸದನದ ಘನತೆಗೆ ಶಾಶ್ವತ ಕಪ್ಪು ಚುಕ್ಕೆ ತಂದಿದ್ದಾರೆ” ಎಂದಿದ್ದಾರೆ.
“ಸಿಟಿ ರವಿಯವರೇ ನಿಮ್ಮ ತಾಯಿಯೂ ಒಂದು ಹೆಣ್ಣು ನಿಮ್ಮ ತಂಗಿಯೂ ಒಂದು ಹೆಣ್ಣೆಂದು ಮರೆಯಬೇಡಿ. ತಕ್ಷಣ ಸಿಟಿ ರವಿಯವರನ್ನು ವಿಧಾನ ಪರಿಷತ್ತಿನಿಂದ ವಜಾಗೊಳಿಸಬೇಕು ಹಾಗೂ ಸಮಸ್ತ ಸ್ತ್ರೀ ಕುಲಕ್ಕೆ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ.