ಹಾವೇರಿ: ಶಿಗ್ಗಾಂವಿ ಸವಣೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ವಿರುದ್ಧ ಯಾವುದೇ ರೀತಿಯ ರೌಡಿಶೀಟ್ ಇಲ್ಲ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ಸೋಮವಾರ ನೀಡಿದ್ದಾರೆ.
ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ವಿರುದ್ಧ ರೌಡಿಶೀಟರ್ ಪ್ರಕರಣ ಇದೆ ಎನ್ನುವ ಬಿಜೆಪಿ ನಾಯಕರಿಂದ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಇದೀಗ ಖುದ್ದು ಹಾವೇರಿ ಎಸ್ಪಿ ಅಂಶುಕುಮಾರ್ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.
“ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದವರಾದ ಯಾಸೀರ್ ಪಠಾಣ್ ಮೇಲೆ ರೌಡಿಶೀಟ್ ಇದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿರುತ್ತದೆ. ಶಿಗ್ಗಾಂವಿಯ ಡಿಎಸ್‌ಪಿ ಮತ್ತು ಪೊಲೀಸ್ ಇನ್ಸಪೆಕ್ಟರ್ (ಪಿಐ) ಅವರ ಕಚೇರಿಯ ದಾಖಲಾತಿಗಳನ್ನು ಪರಿಶೀಲಿಸಲಾಗಿದ್ದು, ಪ್ರಸ್ತುತ ಯಾಸೀರ್ ಪಠಾಣ್ ಅವರ ಮೇಲೆ ಯಾವುದೇ ರೌಡಿ ಶೀಟ್ ಇರುವುದಿಲ್ಲ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಬಸವರಾಜ ಬೊಮ್ಮಾಯಿ, ಶಿಗ್ಗಾಂವಿ ಸವಣೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ರೌಡಿ ಶೀಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಹೇಳಿಕೆ ಬದಲಾಯಿಸಿದ್ದಾರೆ ಎಂದು ದೂರಿದ್ದಾರೆ.