Monday, December 23, 2024

ಮುಡಾ ಪ್ರಕರಣ: ಸಿಎಂ ವಿರುದ್ಧ ಸಿಬಿಐ ತನಿಖೆಗೆ ಕೋರಿದ ಅರ್ಜಿ ವಿಚಾರಣೆ ಡಿ.10ಕ್ಕೆ ಮುಂದೂಡಿದ ಹೈಕೋರ್ಟ್‌

by eesamachara
0 comment
siddaramaiah high court case

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ತಮ್ಮ ಕುಟುಂಬ ಸದಸ್ಯರಿಗೆ ಬದಲಿ ನಿವೇಶನ ಹಂಚಿಕೆ ಹಗರಣ ಆರೋಪದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ವಹಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 10ಕ್ಕೆ ನಿಗದಿಪಡಿಸಿದೆ.

ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನಡೆಸಿದರು.

ವಿಚಾರಣೆ ಆರಂಭವಾದ ಸಂದರ್ಭದಲ್ಲಿ ಜಮೀನಿನ ಮೂಲ ಮಾಲೀಕ ದೇವರಾಜು ಪರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ದುಶ್ಯಂತ್ ದವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶ ಎತ್ತಿ ಹಿಡಿದಿರುವ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ಡಿಸೆಂಬರ್ 5ಕ್ಕೆ ನಿಗದಿಯಾಗಿದೆ. ಈ ನಿಟ್ಟಿನಲ್ಲಿ ಸಿಬಿಐ ತನಿಖೆ ಕೋರಿರುವ ಅರ್ಜಿಯ ವಿಚಾರಣೆಯನ್ನು ಡಿ.5ರ ನಂತರ ನಿಗದಿಪಡಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಈ ವೇಳೆ ದೂರುದಾರ ಸ್ನೇಹಮಹಿ ಕೃಷ್ಣ ಪರ ವಕೀಲ ಕೆ.ಜಿ.ರಾಘವನ್, ವಿಚಾರಣೆ ಮುಂದೂಡುವುದಕ್ಕೂ ಮುನ್ನ ತನಿಖೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒಮ್ಮೆ ಪರಿಶೀಲಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ದುಶ್ಯಂತ್ ದವೆ, ಇದು ಅನ್ಯಾಯದ ನಡೆ, ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪೀಠ, ಇಂದು ಅರ್ಜಿ ವಿಚಾರಣೆ ನಡೆಸುತ್ತಿಲ್ಲ. ಹೀಗಾಗಿ ದಾಖಲೆ ಪರಿಶೀಲನೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿ ವಿಚಾರಣೆಯನ್ನು ಡಿಸೆಂಬರ್ 10ರಂದು 2.30ಕ್ಕೆ ನಿಗದಿಪಡಿಸಿತು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios