ಬೆಂಗಳೂರು: ಬಿಜೆಪಿ ಅವಧಿಯಲ್ಲಿ ಹೆಚ್ಚು ವಕ್ಫ್ ನೋಟಿಸ್ ಜಾರಿ ಮಾಡಿದ್ದಾರೆ. ರೈತರಿಗೆ ನಮ್ಮ ಸರ್ಕಾರದ ಮೇಲೆ ಮಾಡುತ್ತಿದ್ದ ಆಪಾದನೆಯ ಸತ್ಯ ಅರಿವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತರಿಗೆ ಹೆಚ್ಚು ನೋಟಿಸ್ ನೀಡಲಾಗಿದೆ. ಈಗ ಬಿಜೆಪಿಯವರು ಏನು ಹೇಳುತ್ತಾರೆ? ಸತ್ಯವನ್ನು ಯಾವತ್ತೂ ಹೆಚ್ಚು ದಿನ ಮುಚ್ಚಿಡಲು ಆಗುವುದಿಲ್ಲ. ರೈತರಿಗೆ ನೋಟಿಸ್ ಕೊಟ್ಟಿದ್ದೇವೆ ಎಂದು ನಮ್ಮ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿದ್ದರು ಎಂದು ಹೇಳಿದರು.
ಮಾಜಿ ಶಾಸಕ ಕುಮಾರ ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ಸುಮಾರು 2,900 ಎಕರೆಗೆ ನೋಟಿಸ್ ನೀಡಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಕೇವಲ 300 ಎಕರೆಗೆ ನೋಟಿಸ್ ನೀಡಲಾಗಿದೆ. ವಕ್ಫ್ ವಿಚಾರವನ್ನಿಟ್ಟುಕೊಂಡು ರಾಜ್ಯ ಸುತ್ತಲು ಹೊರಟಿರುವ ಬಿಜೆಪಿ ನಾಯಕರು, ಯಾರು ಜಾಸ್ತಿ ನೋಟಿಸ್ ನೀಡಿದ್ದು? ಯಾರ ಮೇಲೆ ಆಪಾದನೆ ಮಾಡಬೇಕು? ಎಂಬುದನ್ನು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ನಾವು ವಿರೋಧ ಪಕ್ಷದಲ್ಲಿದ್ದಾಗ ರೈತರಿಗೆ ನೋಟಿಸ್ ನೀಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಹಾಗಾಗಿ ನಾವು ಆ ವಿಚಾರವನ್ನು ಕೈಗೆತ್ತಿಕೊಂಡಿಲ್ಲ. ಈಗ ನಮ್ಮ ಗಮನಕ್ಕೆ ಬಂದಿದೆ. ಎಚ್ಚರಿಕೆ ವಹಿಸಿಕೊಂಡು ಕೆಲಸ ಮಾಡುತ್ತೇವೆ ಎಂದು ನುಡಿದರು.