ಬಾಗ್ಮಾರ: ಬಡವರ ಲೂಟಿ ಮಾಡುವುದಕ್ಕಾಗಿಯೇ ಕೇಂದ್ರ ಬಿಜೆಪಿ ಸರ್ಕಾರ ಹೊಸ ತೆರಿಗೆ ರೂಪಿಸಿದೆ ಎಂದು ಎಂದು ಕಾಂಗ್ರೆಸ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಜಾರ್ಖಂಡ್‌ನ ಧನ್ಬಾದ್‌ನಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆರಿಗೆ ರಚನೆಯು ದೇಶದ ಬಡ ಜನರಿಂದ ಹಣವನ್ನು ತೆಗೆದುಕೊಳ್ಳಲು ಒಂದು ಮಾರ್ಗವಾಗಿದೆ. ನೀವು ತೆರಿಗೆ ಪಾವತಿಸುವಷ್ಟೇ ಅದಾನಿಯೂ ಪಾವತಿಸುತ್ತಾರೆ. 1 ಲಕ್ಷ ಕೋಟಿ ಮೌಲ್ಯ ಬೆಲೆಬಾಳುವ ಧಾರವಿ ಭೂಮಿಯನ್ನು ಅದಾನಿಗೆ ನೀಡಲು ಮೋದಿ ಸರ್ಕಾರ ಹೊರಟಿದೆ ಎಂದು ದೂರಿದ್ದಾರೆ.
ಮೋದಿ ಅವರು ಕೇವಲ ದೊಡ್ಡ ಭಾಷಣಗಳನ್ನು ಮಾಡುತ್ತಾರೆ. ಅವರು ಏನನ್ನೂ ಮಾಡುವುದಿಲ್ಲ. ಅವರು ದಲಿತರು ಅಥವಾ ಬುಡಕಟ್ಟು ಜನಾಂಗದವರನ್ನು ಎಂದಿಗೂ ತಲುಪುವುದಿಲ್ಲ. ಆದರೆ ಅವರು ಕೈಗಾರಿಕೋದ್ಯಮಿಗಳ ಕುಟುಂಬ ಸದಸ್ಯರ ಮದುವೆಗಳಲ್ಲಿ ಮಾತ್ರ ಭಾಗವಹಿಸುತ್ತಾರೆ. ಮೋದಿ ಸೀಪ್ಲೇನ್‌ನಲ್ಲಿ ಪ್ರಯಾಣಿಸುತ್ತಾರೆ. ಆದರೆ ಬೆಲೆ ಏರಿಕೆಯ ಹೊರೆಯನ್ನು ಬಡವರು ಮತ್ತು ಮಹಿಳೆಯರು ಹೊರಬೇಕಾಗುತ್ತದೆ ಎಂದು ಟೀಕಿಸಿದ್ದಾರೆ.
ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು), ಪರಿಶಿಷ್ಟ ಜಾತಿಗಳು (ಎಸ್‌ಸಿಗಳು) ಮತ್ತು ಇತರ ಹಿಂದುಳಿದ ವರ್ಗಗಳು (ಒಬಿಸಿ) ಭಾರತದ ಜನಸಂಖ್ಯೆಯ 90 ಪ್ರತಿಶತದಷ್ಟು ಇದ್ದಾರೆ. ಆದರೆ ಅವರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವಿಲ್ಲ. ನಾವು ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ಮನ್ನಾ ಮಾಡಿದ ಬಂಡವಾಳಶಾಹಿಗಳ ಸಾಲಕ್ಕೆ ಸಮನಾದ ಹಣವನ್ನು ಬಡವರಿಗೆ ನೀಡುತ್ತೇವೆ. ಜಾರ್ಖಂಡ್‌ನಲ್ಲಿ ನಾವು ಆದಿವಾಸಿಗಳಿಗೆ 28% ಮೀಸಲಾತಿ ನೀಡುತ್ತೇವೆ, 12% ದಲಿತರಿಗೆ ಮತ್ತು 27% ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುತ್ತೇವೆ ಎಂದು ರಾಹುಲ್ ಹೇಳಿದ್ದಾರೆ.
ಬಳಿಕ ರಾಹುಲ್ ಗಾಂಧಿ ಅವರು ಜೆಮ್ ಶೆಡ್ ಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದರು.
ಜೆಮ್ ಶೆಡ್ ಪುರ: ದೇಶದಲ್ಲಿ ನಿರುದ್ಯೋಗ ಹೆಚ್ಚಾಗಲು ನರೇಂದ್ರ ಮೋದಿಯವರ ನೀತಿಗಳು ಕಾರಣವಾಗಿವೆ. ನೋಟು ಅಮಾನೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ ( ಜಿಎಸ್‌ಟಿ ) ನೀತಿಗಳು ದೇಶದಲ್ಲಿ ರೈತರು, ಕಾರ್ಮಿಕರು ಮತ್ತು ಬಡವರನ್ನು ಕೊಲ್ಲುವ ಅಸ್ತ್ರಗಳಾಗಿವೆ ಎಂದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಬಿಜೆಪಿ-ಆರ್‌ಎಸ್‌ಎಸ್ ದೇಶವನ್ನು ಜಾತಿ, ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ವಿಭಜಿಸಲು ರಾಜಕೀಯ ಮಾಡುತ್ತಿವೆ. ಆದರೆ ಕಾಂಗ್ರೆಸ್ ಭಾರತದ ಸಂವಿಧಾನವನ್ನು ರಕ್ಷಿಸಲು ಬಯಸುತ್ತದೆ. ದೇಶದಲ್ಲಿ ಪ್ರೀತಿಯಲ್ಲಿ ನಂಬಿಕೆಯುಳ್ಳ ಇಂಡಿಯಾ ಕೂಟ ಹಾಗೂ ದ್ವೇಷದಲ್ಲಿ ನಂಬಿಕೆಯುಳ್ಳ ಬಿಜೆಪಿ-ಆರ್‌ಎಸ್‌ಎಸ್ ಸಿದ್ದಾಂತಗಳ ನಡುವೆ ಯುದ್ಧ ನಡೆಯುತ್ತಿದೆ. ಇದು ಹಿಂಸಾಚಾರ ಮತ್ತು ಏಕತೆಯ ನಡುವಿನ ಹೋರಾಟವೂ ಆಗಿದೆ ಎಂದು ಅವರು ಹೇಳಿದ್ದಾರೆ.