Saturday, April 19, 2025

ಅಡ್ಡೂರು-ಪೊಳಲಿ ಸೇತುವೆ ಕಾಮಗಾರಿ ಪರಿಶೀಲಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ: ಹೊಸ ಸೇತುವೆ ನಿರ್ಮಾಣದ ಭರವಸೆ

by eesamachara
0 comment

ಬಂಟ್ವಾಳ: ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಂಗಳವಾರ ಪ್ರಗತಿಯಲ್ಲಿರುವ ಪೊಳಲಿ-ಅಡ್ಡೂರು ಸೇತುವೆಯ ಧಾರಣಾ ಸಾಮರ್ಥ್ಯ ವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ್ದು, ಅಗತ್ಯ ಕ್ರಮ ಕೈಗೊಂಡು ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

“ಪೊಳಲಿ ಕ್ಷೇತ್ರದಲ್ಲಿ‌ ಮುಂದಿನ ತಿಂಗಳು ನಡೆಯುವ ಶತಚಂಡಿಕಾಯಾಗ ಬಳಿಕ ಒಂದು ತಿಂಗಳ ಪರ್ಯಂತ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕ್ಷೇತ್ರಕ್ಕಾಗಮಿಸುವ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು‌ ಸಚಿವರಿಗೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸಚಿವರು, ಪೊಳಲಿ ಕ್ಷೇತ್ರದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಕೂಡಲೇ ಸೇತುವೆಯಲ್ಲಿ ಎಲ್ಲಾ ವಾಹನ ಸಂಚಾರ ಸ್ಥಗಿತಗೊಳಿಸಿ ಬೇರಿಂಗ್ ಅಳವಡಿಸುವ ಕಾರ್ಯವನ್ನು ಆದ್ಯತೆಯ ನೆಲೆಯಲ್ಲಿ ಮೊದಲಿಗೆ ಮುಗಿಸಿದ ಬಳಿಕ ಲಘು ವಾಹನಗಳ ಸಂಚಾರ ಅನುಕೂಲ ಮಾಡಿ ಕ್ಷೇತ್ರದ ಜಾತ್ರೆ ಮುನ್ನ ಎಲ್ಲಾ ಕಾಮಗಾರಿ ಪೂರ್ಣಗೊಳಿಸುವಂತೆ ಇಂಜಿನಿಯರ್ ಅವರಿಗೆ ಸೂಚಿಸಿದರು.

ಸೇತುವೆಯ ಸಾಮಥ್ಯ೯ವನ್ನು ವೃದ್ದಿಸುವ  ನಿಟ್ಟಿನಲ್ಲಿ ಯಂತ್ರದ ಮೂಲಕ ಸೇತುವೆಯನ್ನು ಮೇಲಕ್ಕೆತ್ತಿ ಅದರ ಅಡಿ ಭಾಗದಲ್ಲಿ ಬೇರಿಂಗ್ ಅಳವಡಿಸುವ ಕೆಲಸ ಆಗಬೇಕಾಗಿದ್ದು, ಇದಕ್ಕೆ ಹತ್ತರಿಂದ ಹದಿನೈದು ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು‌ ಇಂಜಿನಿಯರ್ ಗಳು ಸಚಿವರ ಗಮನಕ್ಕೆ ತಂದರು.

ಪೊಳಲಿ ಅಡ್ಡೂರು ಹೊಸ ಸೇತುವೆಗೆ ಮನವಿ: ಫಲ್ಗುಣಿ ಹೋರಾಟ ಸಮಿತಿಯ ವತಿಯಿಂದ ಹೊಸ ಸೇತುವೆ ನಿರ್ಮಿಸಲು ಸಚಿವರಿಗೆ ಮನವಿ ನೀಡಲಾಯಿತು. ಮನವಿಗೆ ಸ್ಪಂದಿಸಿದ ಸಚಿವರು ಹೊಸ ಸೇತುವೆಗೆ ಭರವಸೆ ನೀಡಿದರು. ಫಲ್ಗುಣಿ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟೇಶ್‌ ನಾವಡ, ಕಾರ್ಯದರ್ಶಿ ಚಂದ್ರಹಾಸ ಪಲ್ಲಿಪಾಡಿ, ಬಿ.ಎ ಅಬೂಬಕ್ಕರ್‌, ಕಾರ್ತಿಕ್ ಬಲ್ಲಾಳ್‌, ಬಸೀರ್‌ ಗಾಣೆಮಾರ್ ಇದ್ದರು.

ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಮುಖ್ಯ  ಎಂಜಿನಿಯರ್ ಗಳಾದ ಬಿ.ವಿ. ಜಗದೀಶ್‌ ಸೂಪರ್‌ಡೆನ್ಟ್‌ ಎಂಜಿನಿಯ‌ರ್ ಗೋಕುಲ್‌ ದಾಸ್‌, ಕಾರ್ಯ ಪಾಲಕ ಎಂಜಿನಿಯರ್ ಅಮರನಾಥ ಜೈನ್,  ಎಇಇಗಳಾದ ಜೈ ಪ್ರಕಾಶ್, ಪ್ರೀತಂ, ಅರುಣ್ ಪ್ರಕಾಶ್, ದಿಲೀಪ್ ದಾಸ್ ಪ್ರಕಾಶ್, ಹೇಮಂತ್, ಗ್ರಾ.ಪಂ.ಸದಸ್ಯ ಎ.ಕೆ.ಅಶ್ರಫ್ ಸೇರಿದಂತೆ ಅಡ್ಡೂರು ಗ್ರಾಮದ ಸ್ಥಳೀಯರು ಹಾಜರಿದ್ದರು.

ಬಳಿಕ ಸಚಿವ ಸತೀಶ್ ಜಾರಕಿಹೊಳಿ ಅವರು ಕಲ್ಲಗುಡ್ಡೆ ಎಂಬಲ್ಲಿ ಲೋಕೋಪಯೋಗಿ ಇಲಾಖೆಯ  ವತಿಯಿಂದ ನಡೆಸುವ ಸಂಚಾರ ಗಣತಿ ಕಾರ್ಯದ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios