ಕಾಪು: ಸಂವಿಧಾನವನ್ನು ದೇಶಕ್ಕೆ ಅರ್ಪಣೆ ಮಾಡಿದ ನೆನಪಿನಲ್ಲಿ ರಕ್ಷಣಾಪುರ ಜವನೆರ್ ಸಂಘಟನೆಯ ನೇತೃತ್ವದಲ್ಲಿ ನ. 26 ರಂದು ಕಾಪು ಪೇಟೆಯಲ್ಲಿ ಸಂವಿಧಾನ ಆಚರಣೆ, ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ನಡೆಯಲಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದ್ದಾರೆ.
ಶನಿವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಸಂವಿಧಾನ ಜಾಗೃತಿ ಜಾಥಾದ ಕರಪತ್ರ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಸಂಜೆ 3 ಗಂಟೆಗೆ ಜಾಗೃತಿ ಸಂದೇಶ ಜಾಥಾ ನಡೆದು, 4 ಗಂಟೆಗೆ ಕಾಪು ಪೇಟೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಮೂರು ಧರ್ಮಗಳ ಧರ್ಮ ಗುರುಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಾಗ್ಮಿಗಳಾದ ನಿಕೇತ್ ರಾಜ್, ಸುಧೀರ್ ಕುಮಾರ್ ಮುರೋಳಿ, ಜಯಪ್ರಕಾಶ್ ಹೆಗ್ಡೆ, ದಲಿತ ಸಂಘರ್ಷ ಸಮಿತಿಯ ಸುಂದರ ಮಾಸ್ಟರ್, ಆನಂದ್ ಬ್ರಹ್ಮಾವರ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ದೇಶದ ಭದ್ರತೆ, ನಾಗರಿಕ ಹಕ್ಕುಗಳ ರಕ್ಷಣೆ ಮತ್ತು ಕರ್ತವ್ಯಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಸಂವಿಧಾನ ಪೂರಕವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಂವಿಧಾನಕ್ಕೆ ಅಪಾಯ ಎದುರಾಗುತ್ತಿದೆ. ಅಪಪ್ರಚಾರ ನಡೆಯುತ್ತಿದೆ. ಈ ಕುರಿತಾಗಿ ಜನರಿಗೆ ಅದರ ಉದ್ದೇಶ, ಹಕ್ಕುಗಳ ಬಗ್ಗೆ ತಿಳುವಳಿಕೆ ಮೂಡಿಸುವುದು, ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಜಾಗೃತಿ ಜಾಥ ನಡೆಯಲಿದೆ ಎಂದು ಹೇಳಿದರು.
ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು ಐದು ಸಾವಿರಕ್ಕೂ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಸಂವಿಧಾನವನ್ನು ದೇಶಕ್ಕೆ ಅರ್ಪಣೆ ಮಾಡಿದ ನೆನಪಿನಲ್ಲಿ ಮೂರು ಸಾವಿರ ಮಹಿಳೆಯರಿಗೆ ಸೀರೆ ವಿತರಿಸಲಾಗುವುದು ಎಂದರು.
ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್, ಮಹಿಳಾ ಕಾಂಗ್ರೆಸ್ ಕಾಪು ಬ್ಲಾಕ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ರಕ್ಷಣಾಪುರ ಜವನೆರ್ ಸಂಘಟನೆಯ ಅಧ್ಯಕ್ಷ ನವೀನ್ ಶೆಟ್ಟಿ ಪಡುಬಿದ್ರಿ, ದಲಿತ ಸಂಘ ಸಮಿತಿ ಮುಖಂಡ ಶೇಖರ್ ಹೆಜ್ಮಾಡಿ ಉಪಸ್ಥಿತರಿದ್ದರು.