ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಸೆಗೆ ಬಿದ್ದು ಮಹಿಳೆಯೊಬ್ಬರು 10.45 ಕೋಟಿ ರೂ. ಹಣ ಕಳೆದುಕೊಂಡಿರುವ ಘಟನೆ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ವಂಚನೆಗೊಳಗಾದ ಮಹಿಳೆಯನ್ನು ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ವಿಜಯಲಕ್ಷ್ಮೀ ಅವರು 10.45 ಕೋಟಿ ಹಣ ಹೂಡಿಕೆ ಮಾಡಿದ್ದು, ತನ್ನ ಷೇರು ಮಾರುಕಟ್ಟೆಯ ಖಾತೆಯಲ್ಲಿ 23 ಕೋಟಿ ರೂಪಾಯಿ ಎಂದು ತೋರಿಸುತ್ತಿತ್ತು. ಹೂಡಿಕೆಯೊಂದಿಗೆ ಹೆಚ್ಚುವರಿಯಾಗಿ ಬಂದ ಹಣವೂ ಸೇರಿದಂತೆ ಎಲ್ಲ ಹಣವನ್ನು ಬಿಡಿಸಿಕೊಳ್ಳಲು ಮುಂದಾದಾಗ ಕಂಪನಿಯವರು ಅರ್ಧಕ್ಕೆ ಹಣವನ್ನು ಡ್ರಾ ಮಾಡಿಕೊಳ್ಳಲು ಬರುವುದಿಲ್ಲ, ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಹಣ ಡ್ರಾ ಮಾಡಲು ಆಯ್ಕೆಯೇ ನೀಡದಿದ್ದಾಗ ವಂಚನೆಗೊಳಗಾಗಿರುವ ಬಗ್ಗೆ ತಿಳಿದು ಬಂದಿದೆ.
“ಷೇರು ಕಂಪನಿಯೊಂದರಲ್ಲಿ ಆನ್‌ಲೈನ್ ಮೂಲಕ ಹಂತ ಹಂತವಾಗಿ 10,45,50,000 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಂದ ಹೂಡಿಕೆ ಮಾಡಿದ್ದೆ. ಲಾಭಾಂಶ ತೋರಿಸಿದ ಹಣವನ್ನು ವಿತ್ ಡ್ರಾ ಮಾಡಲು ಯತ್ನಿಸಿದಾಗ ಹಣ ವಿತ್ ಡ್ರಾ ಆಗಲಿಲ್ಲ. ಈ ವೇಳೆ ನಾನು ಮೋಸ ಹೋಗಿರುವುದು ಗೊತ್ತಾಯಿತು. ಕಂಪನಿಯನ್ನು ಹುಡುಕಿಕೊಂಡು ಮುಂಬೈಗೆ ತೆರಳಿದ್ದೆ. ಅದೂ ಕೂಡ ಪ್ರಯೋಜನವಾಗಲಿಲ್ಲ” ಎಂದು ದೂರಿನಲ್ಲಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.
“ವಿಜಯಲಕ್ಷ್ಮಿ ಎಂಬವರು 10.45 ಕೋಟಿ ರೂ. ವಂಚನೆಗೊಳಗಾಗಿದ್ದಾರೆ. ಈಗಾಗಲೇ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂರು ಕೋಟಿ ಮೇಲ್ಪಟ್ಟ ಹಣ ವಂಚನೆ ನಡೆದರೆ ಅಂತಹ ಪ್ರಕರಣಗಳು ಸಿಐಡಿಗೆ ವರ್ಗಾವಣೆ ಆಗುತ್ತವೆ. ಆದ್ದರಿಂದ ಈಗಾಗಲೇ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಎಫ್ಐಆರ್ ಮಾತ್ರ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ” ಎಂದು ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.