ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ವೀಡಿಯೊ ಹರಿಬಿಟ್ಟ ವ್ಯಕ್ತಿಯ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಶನಿವಾರ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಅಭ್ಯರ್ಥಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನಿರ್ದೇಶನದ ಮೇರೆಗೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಸುರತ್ಕಲ್, ಪಣಂಬೂರು, ಕಾವೂರು, ವಾಮಂಜೂರು, ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
“ಮೋಹಿತ್ ಎನ್.ಎಮ್. ಅಲಿಯಾಸ್ ಮೋಹಿತ್ ನರಸಿಂಹಮೂರ್ತಿ ಎಂಬಾತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಅವಹೇಳನಕಾರಿಯಾಗಿ ವೀಡಿಯೊ ಮಾಡಿ ವಿವಿಧ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ಮಾಡಿ ಮಾನಹಾನಿಗೆ ಯತ್ನಿಸಿದ್ದಾನೆ. ಆ ಮೂಲಕ ಪ್ರಚೋದನೆ ನೀಡಿ ಶಾಂತಿಭಂಗಕ್ಕೆ ಯತ್ನಿಸಿದ್ದಾನೆ. ಈತನನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ದೂರು ನೀಡುವ ನಿಯೋಗದಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಕೆಪಿಸಿಸಿ ಸದಸ್ಯ ಆರ್.ಕೆ. ಪೃಥ್ವಿರಾಜ್, ಮುಖಂಡರಾದ ಪದ್ಮನಾಭ ಕೋಟ್ಯಾನ್, ಮೆಲ್ವಿನ್ ಡಿಸೋಜ, ಶ್ರೀಧರ್ ನೀರುಮಾರ್ಗ, ಜಯಂತಿ ವಾಮಂಜೂರು, ಕಿಶೋರ್ ಶೆಟ್ಟಿ ಸುರತ್ಕಲ್, ಭಾಸ್ಕರ ಪೂಜಾರಿ, ರೋಹಿತ್, ವಾಲ್ಟರ್ ಡಿಕುನ್ಹಾ, ಕೀರ್ತಿರಾಜ್, ವಿಶಾಲ್ ಪೂಜಾರಿ, ಶ್ರೀನಿವಾಸ್ ಸಾಲಿಯಾನ್ ಬೋಂದೆಲ್, ವಿಶು ಪೂಜಾರಿ ಪಚ್ಚನಾಡಿ, ರವಿ ಪಚ್ಚನಾಡಿ ಉಪಸ್ಥಿತರಿದ್ದರು.

