ಮಂಗಳೂರು: 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ 54 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತ ಗಳಿಸಿದ ಹಿನ್ನೆಲೆಯಲ್ಲಿ ಜಾರ್ಖಂಡ್ ಚುನಾವಣೆಯ ಸಂಯೋಜಕರಾಗಿದ್ದ ಬಿ.ಕೆ. ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಮಂಗಳೂರಿನಲ್ಲಿ ಅಭಿನಂದಿಸಿದ್ದಾರೆ.
ಖಾಸಗಿ ಕಾರ್ಯಕ್ರಮ ನಿಮಿತ್ತ ಇಂದು ಸಂಜೆ ಮಂಗಳೂರಿಗೆ ಆಗಮಿಸಿದ್ದ ವಿಧಾನ ಪರಿಷತ್ ಶಾಸಕ ಬಿ.ಕೆ. ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರ ನಿಯೋಗ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿಯಾಗಿ ಸ್ವಾಗತಿಸಿ ಅಭಿನಂದಿಸಿದರು.
ಈ ಸಂದರ್ಭ ಚಿತ್ತರಂಜನ ಶೆಟ್ಟಿ, ಮನೋರಾಜ್ ರಾಜೀವ್, ಎಂ.ಜಿ ಹೆಗ್ಡೆ, ಮಂಜುಳಾ ನಾಯಕ್ , ನೀತ್ ಶರಣ್, ರಾಜೇಶ್ ದೇವಾಡಿಗ, ಇಬ್ರಾಹೀಂ ನಡುಪದವು, ಗಣೇಶ್ ಪೂಜಾರಿ, ಪ್ರಸಾದ್ ಕುಂದರ್, ಟಿ.ಸಿ ಗಣೇಶ್, ರಿತೇಶ್ ಅಂಚನ್ , ಉಮ್ಮರ್ ಕುಜಞಿ ಸಾಲೆತ್ತೂರ್, ಜನಾರ್ದನ್ ಪೂಜಾರಿ, ಮಲ್ಲಿಕಾರ್ಜುನ್ , ಚಂದ್ರಪ್ಪ ಬಿ.ಕೆ, ಪ್ರಶಾಂತ್ ಅಮೀನ್, ಸ್ನೇಹ ಕುಡ್ವ, ಮಮತಾ ಕುಡ್ವ, ನಿರ್ಮಲ ಪೈ, ಅನುರಾಧ ಬಾಳಿಗಾ , ಹರ್ಷ ಬಾಳಿಗಾ ಮತ್ತಿತರು ಉಪಸ್ಥಿತರಿದ್ದರು.
ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಹಿರಿಯ ಸಂಯೋಜಕರನ್ನಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಮೂವರನ್ನು ನೇಮಿಸಲಾಗಿತ್ತು. ಹರಿಪ್ರಸಾದ್ ಅವರು ಹೈಕಮಾಂಡ್ ನಿರ್ದೇಶನದಂತೆ ಇಲ್ಲಿನ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಬಹುತೇಕ ಚುನಾವಣಾ ಸಮೀಕ್ಷೆಗಳು ಜಾರ್ಖಂಡ್ ನಲ್ಲಿ ಇಂಡಿಯಾ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ಅತ್ಯಂತ ತೀವ್ರ ಹಣಾಹಣಿ ಏರ್ಪಡಲಿದೆಯೆಂದು ಭವಿಷ್ಯ ನುಡಿದಿದ್ದವು. ಆದರೆ ಆ ಎಲ್ಲಾ ಸಮೀಕ್ಷೆಗಳನ್ನು ತಲೆಕೆಳಗೆ ಮಾಡಿ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟವು ಪಚಂಡ ಗೆಲುವನ್ನು ದಾಖಲಿಸಿದೆ. ಅಧಿಕಾರದ ಗದ್ದುಗೆ ಹಿಡಿಯಲು ಶತಾಯಗತಾಯ ಯತ್ನಿಸಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗಿದ್ದು, ಕೇವಲ 26 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

