ಮೈಸೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ‘ಕರಿಯಣ್ಣ’ ಎಂದು ಕರೆದಿದ್ದ ಕಾಂಗ್ರೆಸ್ ಶಾಸಕ, ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಮಂಗಳವಾರ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಾನು ಮತ್ತು ಕುಮಾರಸ್ವಾಮಿ ಅವರು ಎಷ್ಟು ಆತ್ಮೀಯರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. 24 ಗಂಟೆಯಲ್ಲಿ 16 ಗಂಟೆ ಇಬ್ಬರು ಜೊತೆಯಲಿರುತ್ತಿದ್ದೆವು. ಆಗ ಅವರು ಪ್ರೀತಿಯಿಂದ ನನಗೆ ಕುಳ್ಳ ಅನ್ನುತ್ತಿದ್ದರು, ನಾನು ಅವರಿಗೆ ಕರಿಯಣ್ಣ ಎನ್ನುತ್ತಿದ್ದೆ. ಕರಿಯಣ್ಣ ಎಂದು ಬಹಳಷ್ಟು ಬಾರಿ ಕರೆದಿದ್ದೇನೆ. ಚುನಾವಣೆ ಹಿನ್ನೆಲೆ ವಿವಾದ ಸೃಷ್ಟಿಯಾಗಿದೆ ಅಷ್ಟೇ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ” ಎಮದು ಹೇಳಿದರು.
‘ದೇವೇಗೌಡ ಅವರ ಕುಟುಂಬವನ್ನು ಕೊಂಡುಕೊಳ್ಳುತ್ತೇನೆ’ಎಂಬ ಹೇಳಿಕೆ ಪ್ರತಿಕ್ರಿಯಿಸಿದ ಜಮೀರ್, ”ಯಾರಾದರು ದೇವೇಗೌಡರ ಕುಟುಂಬವನ್ನು ಕೊಂಡುಕೊಳ್ಳಲು ಸಾಧ್ಯವೇ? ನನಗೆ ದೇವೇಗೌಡರ ಮೇಲೆ ಬಹಳ ಗೌರವವಿದೆ. ಈ ಹಿಂದೆ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಖರೀದಿ ಮಾಡುತ್ತೇನೆ ಎಂದಿದ್ದರು. ಆ ವಿಚಾರವನ್ನು ಉಲ್ಲೇಖಿಸಿ ನಾನು ಹೇಳಿದ್ದೇನೆ” ಎಂದು ಸ್ಪಷ್ಟಪಡಿಸಿದರು.