ಅಡ್ಡೂರು: ದೇಶದ ಮತೀಯವಾದಿ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ದುರ್ಬಲ ಜಾತ್ಯಾತೀಯ ಪಕ್ಷ ಅಥವಾ ಸಂಘಟನೆಯಿಂದ ಸಾಧ್ಯವಿಲ್ಲ. ಬಲಿಷ್ಠವಾದ ಜಾತ್ಯಾತೀಯ ಸಿದ್ಧಾಂತ ಅಡಿಯಲ್ಲಿ ಕೆಲಸ ಮಾಡಿದರೆ ಮಾತ್ರ ಅದನ್ನು ನಿಗ್ರಹಿಸಲು ಸಾಧ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಿಸಿದ್ದಾರೆ.
ಇಲ್ಲಿನ ಕಾಂಜಿಲಕೋಡಿಯ ನವೀಕೃತ ಬದ್ರುಲ್ ಹುದಾ ಜುಮಾ ಮಸೀದಿಯ ಉದ್ಘಾಟನೆ ಪ್ರಯುಕ್ತ ಭಾನುವಾರ ಆಯೋಜಿಸಿದ ಸೌಹಾರ್ದ ಸಂಗಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
“ಜನರ ಮಧ್ಯೆ ಅಪನಂಬಿಕೆ, ಅವಿಶ್ವಾಸ ಹೆಚ್ಚಿರುವ ಈ ಕಾಲ ಘಟ್ಟದಲ್ಲಿ ನಾವೆಲ್ಲರೂ ಸೌಹಾರ್ದತೆಗೆ ಒತ್ತು ನೀಡಿ ಉಳಿಸುವ ಕಾರ್ಯ ಮಾಡಬೇಕು. ಹುಟ್ಟುವಾಗ ಇಂತಹದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಯಾರು ಅರ್ಜಿ ಹಾಕಿ ಹುಟ್ಟುವುದಿಲ್ಲ. ಧಾರ್ಮಿಕ ಚೌಕಟ್ಟನ್ನು ಅರ್ಥಮಾಡಿಕೊಂಡು ಬದುಕುವುದೇ ಧರ್ಮ. ಎಲ್ಲ ಧರ್ಮದ ಜನರನ್ನು ಪ್ರೀತಿಸುವವರು ಅಧಿಕಾರಕ್ಕೆ ಬರಬೇಕು. ಜಾತಿ-ಧರ್ಮದ ಹೆಸರಿನಲ್ಲಿ ಜನರನ್ನು ದ್ವೇಷಿಸುವವರು ಅಧಿಕಾರ ಸ್ಥಾನಕ್ಕೆ ಬರಲು ಅನರ್ಹರು” ಎಂದು ಹೇಳಿದರು.
“ಸೌಹಾರ್ದತೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಕಾರ್ಯದಲ್ಲಿ ಏನು ಮಾಡುತ್ತೇವೆ ಅದು ಮುಖ್ಯ. ಹಿಂಸೆಗೆ ಹಿಂಸೆಯೇ ಉತ್ತರವಲ್ಲ. ದ್ವೇಷ ಹರಡುವವರನ್ನು ಪ್ರೀತಿಯ ಮೂಲಕ ಎದುರಿಸಬೇಕಾಗಿದೆ. ಅಹಿಂಸೆಗೆ ಒತ್ತು ನೀಡುವ ಮೂಲಕ ಸಾಮರಸ್ಯದ ಸಮಾಜ ಕಟ್ಟಲು ಪ್ರಯತ್ನಿಸಬೇಕು ” ಎಂದು ಕರೆ ನೀಡಿದರು.
“ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ನಮ್ಮ ಸ್ಪಷ್ಟ ವಿರೋಧವಿದೆ. ಮಾಧ್ಯಮಗಳಿಗೆ ಮತೀಯ ವಿಚಾರಗಳು ಚರ್ಚೆಗೆ ಬೇಕು. ಈ ಬಗ್ಗೆ ಜನರು ತಪ್ಪು ತಿಳುವಳಿಕೆ ಗ್ರಹಿಸಿಕೊಳ್ಳಬಾರದು. ಅಂತಹವರನ್ನು(ಬಿಜೆಪಿ) ಅಧಿಕಾರದಿಂದ ದೂರ ಇಡುವ ಪ್ರಯತ್ನ ಮಾಡಬೇಕು” ಎಂದರು.
ಇದಕ್ಕೂ ಮೊದಲು ಮಾತನಾಡಿದ ಎಸ್ಕೆಎಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ, “ಕೋಮು ಸೌಹಾರ್ದತೆ ಇಂದಿನ ಕಾಲದ ಬೇಡಿಕೆಯಾಗಿದೆ. ಎಲ್ಲ ಜಾತಿ-ಧರ್ಮಗಳು ಮಾನವೀಯತೆಯ ಬಗ್ಗೆ ಏಕಾಭಿಪ್ರಾಯವನ್ನು ಹೊಂದಿವೆ. ವೈವಿಧ್ಯತೆಯ ಧಾರ್ಮಿಕ-ಸಾಂಸ್ಕೃತಿ, ಬಹುತ್ವನ್ನು ಸ್ವೀಕರಿಸಿರುವ ಭಾರತದಲ್ಲಿ ಸೌಹಾರ್ದತೆಯ ಪರಂಪರೆಯೇ ಬೆಳೆಯುತ್ತದೆ ಹೊರತು ಏಕರೀತಿಯ ಸಂಸ್ಕೃತಿಯನ್ನು ಹೇರಲು ಪ್ರಯತ್ನ ಪಟ್ಟರೆ ಅದು ಶಾಶ್ವತವಾಗಿ ನಲೆ ನಿಲ್ಲಲು ಸಾಧ್ಯವಿಲ್ಲ. ಮಕ್ಕಳಿಗೆ ಅಸಹಿಷ್ಣುತೆಯ ಬಗ್ಗೆ ಉಣಬಡಿಸಿದರೆ ನಾಳೆ ನಮ್ಮ ವಿರುದ್ಧವೇ ತಿರುಗಿ ಬೀಳಲಿದ್ದಾರೆ. ಅವರಿಗೆ ಅಹಿಂಸೆಯ ಬಗ್ಗೆ ಕಲಿಸಿಕೊಡುವ ಜಬಾಬ್ದಾರಿ ಪ್ರತಿ ಸಮುದಾಯದ ಮೇಲಿದೆ” ಎಂದು ಹೇಳಿದರು.
“ಸಮಾಜದಲ್ಲಿ ಇಸ್ಲಾಂ ಧರ್ಮ ಅತಿ ಹೆಚ್ಚು ತಪ್ಪು ಕಲ್ಪನೆಗೆ ಗೀಡುಗಾಗುತ್ತಿದ್ದು, ವಕ್ಫ್ ವಿಚಾರದಲ್ಲಿ ವ್ಯಾಪಕ ಅಪಪ್ರಚಾರ ನಡೆಸಲಾಗುತ್ತಿದೆ. ವಕ್ಫ್ ಭೂಮಿ ಸರ್ಕಾರದ್ದಲ್ಲ. ಮುಸ್ಲಿಂ ಪೂರ್ವಿಕರು ವಿವಿಧ ಉದ್ದೇಶಗಳಿಗೆ ದಾನ ಮಾಡಿರುವ ಭೂಮಿಯಾಗಿದೆ. ವಕ್ಫ್ ಧಾರ್ಮಿಕ ಸ್ವರೂಪದ ಆರಾಧನೆಯ ಭಾಗ” ಎಂದು ಪ್ರತಿಪಾದಿಸಿದರು.
ಕರ್ನಾಟಕ ಎಸೆಸ್ಸೆಫ್ ರಾಜ್ಯಧ್ಯಕ್ಷ ಸೂಫಿಯಾನ್ ಸಖಾಫಿ ಮಾತನಾಡಿ, “ಭಾರತದ ಸಾಂಸ್ಕೃತಿಕ, ಆಧ್ಯಾತ್ಮಿಕ ಬದುಕಿನಲ್ಲಿ ಒಡಕಿಗೆ ಅವಕಾಶ ಇಲ್ಲ. ಎಲ್ಲಾ ಧರ್ಮಗಳು ಕೂಡಿ ಬಾಳುವುದರ ಮಹತ್ವವನ್ನೇ ಒತ್ತಿ ಹೇಳಿವೆ. ದೇಶ ಉಳಿದಿರುವುದೇ ಭಾವೈಕ್ಯತೆಯಿಂದ. ಒಂದು ಧರ್ಮ ಅಥವಾ ಸಿದ್ಧಾಂತಕ್ಕೆ ದೇಶವನ್ನು ಸೀಮಿತಗೊಳಿಸಲು ಸಾಧ್ಯವಿಲ್ಲ. ದೇಶದ ಸೌಹಾರ್ದ ಪರಂಪರೆಯನ್ನು ನಾಶ ಮಾಡಲು ಯಾರಿಂದಲೂ ಆಗುವುದಿಲ್ಲ” ಎಂದು ನುಡಿದರು.
ಎಸ್.ಡಿ.ಪಿ.ಐ ಮಂಗಳೂರು ನಗರ ಅಧ್ಯಕ್ಷ ಜಲೀಲ್ ಕೃಷ್ಣಾಪುರ ಮಾತನಾಡಿ, “ಅಮಲು ಪದಾರ್ಥಗಳ ಸೇವೆನೆ ಈಗ ಗ್ರಾಮೀಣ ಭಾಗದಲ್ಲೂ ಹಬ್ಬಿದ್ದು, ಯುವಕರು ಇದಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯುವ ಜವಾಬ್ದಾರಿ ಜಮಾಅತ್ ನ ಮೇಲೂ ಇದೆ. ಸೌಹಾರ್ದತೆ ಮಾತಿನಲ್ಲಿ ಬಯಸಿದರೆ ಸಾಲದು. ಅದು ಕಲ್ಮಷವಿಲ್ಲದ ಮನಸ್ಸಿನಿಂದ ಕೂಡಿರಬೇಕು. ಯಾವುದೇ ಧರ್ಮವನ್ನು ತಪ್ಪಾಗಿ ವಿಮರ್ಶಿಸುವುದು ದೇಶಕ್ಕೆ ಮಾರಕ. ತನ್ನ ಧರ್ಮದ ಹಕ್ಕುಗಳಿಗಾಗಿ ಹೋರಾಡುವುದು ಕೋಮುವಾದಿಯಲ್ಲ” ಎಂದ ಅವರು, “ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ಸಮುದಾಯ ಎಚ್ಚರಗೊಳ್ಳಬೇಕಿದ್ದು, ಈ ಮಸೂದೆಯನ್ನು ಒಗ್ಗೂಡಿ ವಿರೋಧಿಸಬೇಕು” ಎಂದು ಹೇಳಿದರು.
ಈ ವೇಳೆ ಲತೀಫ್ ಗುರುಪುರ, ರಝಾಕ್ ಮಂಜೊಟ್ಟಿ, ಅರುಣ್ ಶೆಟ್ಟಿ, ಇಸ್ಮಾಯೀಲ್ ಕೊಕ್ಕಡ, ಮೊಹಿಯುದ್ದೀನ್ ಸಅದಿ, ಇಂಜಿನಿಯರ್ ಗಳಾದ ಮುಝಮ್ಮಿಲ್, ಹಬೀಬ್ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವ, ಬಿ.ಎಚ್.ಜೆ.ಎಂ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಎಂ.ಎಚ್.ಮುಹಿಯುದ್ದೀನ್, ಆಸೀಫ್ ಆದರ್ಶ್ ಮಾತನಾಡಿದರು. ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಝಕರಿಯಾ ಕೋಡಿಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಸದಕತುಲ್ಲಾ ಫೈಝಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಝ್, ಮೊಹಮ್ಮದ್ ಪೊಳಲಿ, ಉಸ್ಮಾನ್ ಏರ್ ಇಂಡಿಯಾ, ಹಾಜಿ ಇಸ್ಮಾಯೀಲ್ ಗೇಟ್ ಹೌಸ್, ಇಬ್ರಾಹೀಂ ಬೊಟ್ಟಿಕೆರೆ, ಲತೀಫ್ ಸಿ.ಎಂ, ಶರೀಫ್ ಪೊನ್ನೆಲ, ನೌಫಲ್ ಕೋಡಿಬೆಟ್ಟು, ಎ.ಕೆ.ಆರಿಸ್, ಇಕ್ಬಾಲ್, ಶಮೀರ್ ನೂಯಿ, ಹಸನ್ ಪೊನ್ನೆಲ, ಕಮಲ್ ಕಾಂಜಿಲಕೋಡಿ, ಎ.ಕೆ.ಮುಸ್ತಫಾ, ಗ್ರಾ.ಪಂ.ಸದಸ್ಯ ಎ.ಕೆ.ಅಶ್ರಫ್, ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ತಫಾ ಹನೀಫಿ, ಫಾರೂಕ್ ಯಮಾನಿ ಮತ್ತಿತರರು ಉಪಸ್ಥಿತರಿದ್ದರು.
ಕಾಂಜಿಲಕೋಡಿ ಬಿ.ಎಚ್.ಜೆ.ಎಂ ಖತೀಬ್ ಯಾಕೂಬ್ ಫೈಝಿ ದುಆ ನೆರವೇರಿಸಿದರು. ಎ.ಕೆ.ರಿಯಾಝ್ ಸ್ವಾಗತಿಸಿದರು. ಮೊಹಮ್ಮದ್ ಕುಂಞಿ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
