ಶಿವಮೊಗ್ಗ: ವಕ್ಪ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ಇಲ್ಲಿನ ಜಯನಗರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ (ಸ್ವಯಂಪ್ರೇರಿತ ಪ್ರಕರಣ) ದಾಖಲಾಗಿದೆ.
ಮಾಧ್ಯಮಗಳ ವರದಿ ಆಧರಿಸಿ ನಿರ್ದಿಷ್ಟ ಧರ್ಮ ಹಾಗೂ ಪಕ್ಷದವರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುವುದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ ಎಂದು ಇನ್‌ಸ್ಪೆಕ್ಟರ್ ಎಚ್.ಎಂ. ಸಿದ್ದೇಗೌಡ ಅವರು ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ವಕ್ಫ್ ಆಸ್ತಿ ವಿವಾದ ವಿಚಾರದ ಬಗ್ಗೆ ನವೆಂಬರ್ 13ರಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಈಶ್ವರಪ್ಪ, “ಕಾಂಗ್ರೆಸ್‍ನವರು ವೋಟಿಗಾಗಿ ಭಾರತವನ್ನೇ ಮತಾಂತರ ಮಾಡಲು ಹೊರಟ್ಟಿದ್ದಾರೆ. ಕಾಂಗ್ರೆಸ್ ಗರನ್ನು ಹುಡುಕಿ ಹೊಡೆಯುವ ಕಾಲ ಬರಲಿದೆ. ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳಬೇಕಾಗುತ್ತದೆ. ಮುಸ್ಲಿಮರಿಗೆ ರಸ್ತೆಯಲ್ಲಿ ಹುಡುಕಿ ಹುಡುಕಿ ಹೊಡೆಯುತ್ತಾರೆ. ಮುಸ್ಲಿಮರನ್ನು ಕೊಲ್ಲುವಂತಹ ದಿನ ಬರುತ್ತದೆ” ಎಂದು ತೀವ್ರ ಅಸಂಬಂಧ ಹೇಳಿಕೆ ನೀಡಿದ್ದರು.