ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ಅಕ್ರಮ ಆರೋಪದ ಕುರಿತು ತನಿಖೆಗೆ ಆದೇಶಿಲಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರಿಗೆ 6 ತಿಂಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಹಿಂದಿನ ಎಸಿಎಸ್ ಡಾ.ಇ.ವಿ.ರಮಣರೆಡ್ಡಿ ವರದಿ ಪರಿಶೀಲಿಸಿ ತನಿಖೆಗೆ ಆದೇಶ ನೀಡಿದೆ.
2020-21 ರಿಂದ 2022-23ರ ಅವಧಿಯಲ್ಲಿ ಕೆಕೆಆರ್ ಡಿಬಿ ಮಂಡಳಿಗೆ ಬಿಡುಗಡೆಯಾದ ಅನುದಾನದ ಹಣ ವಿನಿಯೋಗದ ಕುರಿತು ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ಆಗಿರುವ 300 ಕೋಟಿ ರೂ.ಅಕ್ರಮ ವೆಚ್ಚ ಸೇರಿದಂತೆ ಇತರ ಅಕ್ರಮಗಳು ನಡೆದಿರುವುದರ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಆದೇಶಿಸಲಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಗೆ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಆದೇಶಿಸಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ 2-3 ವರ್ಷಗಳಿಂದ 3000 ಕೋಟಿ ರೂ. ಅನುದಾನದಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವ ಆರೋಪಗಳು ಕೇಳಿಬಂದಿತ್ತು. ಈ ಬಗ್ಗೆ ಇಲಾಖಾ ತನಿಖೆ ಸಚಿವ ಪ್ರಿಯಾಂಕ್ ಖರ್ಗೆ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು.