ಅಡ್ಡೂರು: ಸರಕಾರಿ ಆಂಗ್ಲ ಮಾಧ್ಯಮ ಶಾಲೆಗೆ ಸುಸಜ್ಜಿತವಾದ ಐದು ತರಗತಿಗಳ ನೆಲಮಹಡಿ ಕಟ್ಟಡ ನಿರ್ಮಾಣದ ವೆಚ್ಚವನ್ನು ಭರಿಸುವುದಾಗಿ ಉದ್ಯಮಿ, ಶಿಕ್ಷಣ ಪೋಷಕ ಝಕರಿಯಾ ಜೋಕಟ್ಟೆ ಘೋಷಿಸಿದ್ದಾರೆ.
ಸೋಮವಾರ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ನೂತನ ಆಂಗ್ಲ ಮಾಧ್ಯಮ ತರಗತಿಗಳ ಸೇರ್ಪಡೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
“ನಾನು ಅಡ್ಡೂರಿನ ಮದುಮಗ. ನನ್ನ ಪತ್ನಿಯ ಊರು ಇದೇ ಆಗಿದ್ದು, ಆಕೆಯ ಆಶಯದಂತೆ ನನ್ನ ಮಾವ ಮತ್ತು ಅತ್ತೆಯ ನೆನಪಿಗಾಗಿ ಸರಕಾರಿ ಶಾಲೆಗೆ ಸುಸಜ್ಜಿತವಾದ ಐದು ತರಗತಿಗಳ ನೆಲಮಹಡಿ ಕಟ್ಟಡ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದೇನೆ. ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದರೆ ನಾವು ಯಾವತ್ತೂ ಸೋಲುವುದಿಲ್ಲ. ಎಲ್ಲರೂ ಒಂದಾಗಿ ಸರಕಾರಿ ಶಾಲೆಯನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿಗೆ ಬೇಕಾಗಿ ಶ್ರಮವಹಿಸಿ” ಎಂದು ಕರೆ ನೀಡಿದರು.
ಇದಕ್ಕೂ ಮೊದಲು ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ, ಊರು ಅಭಿವೃದ್ಧಿ ಕಾಣಬೇಕಾದರೆ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕು. ಈ ಅವಕಾಶ ಸಿಗದಿದ್ದಾಗ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಯಿದೆ. ಅಭಿವೃದ್ಧಿಯ ಕೆಲಸದಲ್ಲಿ ರಾಜಕೀಯ ಮಾಡುವುದಿಲ್ಲ. ರಾಜಕೀಯಬೇಕಾಗಿ ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯನ್ನು ಬಲಿಕೊಡಬಾರದು. ಶಾಲೆಯ ವಠಾರದಲ್ಲಿ ರಾಜಕೀಯ ತರಬಾರದು. ಇದನ್ನು ಹೊರಗಿಟ್ಟರೆ ಶಾಲೆಗಳು ಉದ್ಧಾರವಾಗುತ್ತದೆ. ಶಾಲಾಭಿವೃದ್ಧಿಗೆ ಸಹಕಾರ ನೀವುದಾಗಿ ಭರವಸೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಅಡ್ಡೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಅನಿವಾಸಿ ಉದ್ಯಮಿ ಹಿದಾಯತ್ ಅಡ್ಡೂರು, “ಕಡಂಬಾರು ಕುಟುಂಬಸ್ಥರು 1967ರಲ್ಲಿ ದಾನವಾಗಿ ನೀಡಿದ ಜಾಗದಲ್ಲಿ ಅಡ್ಡೂರು ಸರಕಾರಿ ಶಾಲೆ ಪ್ರಾರಂಭವಾಗಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾದಾನ ಪಡೆದಿದ್ದಾರೆ. ನನ್ನ ಶೈಕ್ಷಣಿಕ ಜೀವನ ಇಲ್ಲೇ ಶುರುವಾಗಿದ್ದು, ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ” ಎಂದರು.
ವಿದ್ಯಾರ್ಥಿಗಳ ದಾಖಲಾತಿ ಕುಂಠಿತವಾಗಿ ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಈ ಸಂದರ್ಭ ಇಲ್ಲಿನ ನಾಗರಿಕರು ಒಟ್ಟಾಗಿ ಶಾಲೆ ಉಳಿಸುವ ಉದ್ದೇಶದಿಂದ ಆಂಗ್ಲ ಮಾಧ್ಯಮ ಅನುಮತಿಗೆ ಬೇಡಿಕೆಯಿಟ್ಟಿದ್ದರು. ಅದರಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತಂದು ವಿಶೇಷ ಅನುಮತಿ ದೊರಕಿಸಿ ಕೊಟ್ಟಿದ್ದಾರೆ. ಆಂಗ್ಲ ಮಾಧ್ಯಮ ಶಿಕ್ಷಕಿಯ ಒಂದು ವರ್ಷದ ವೇತನವನ್ನು ಅಡ್ಡೂರು ಸೆಂಟ್ರಲ್ ಕಮಿಟಿ ಭರಿಸುವ ವಾಗ್ದಾನ ಮಾಡಿದೆ. ಕ್ಷೇತ್ರದ ಶಾಸಕರು, ಸ್ಥಳೀಯ ಸಂಘ-ಸಂಸ್ಥೆಗಳು, ದಾನಿಗಳು ನೀಡಿದ ಸಹಕಾರವನ್ನು ಸ್ಮರಿಸಿದರು.
ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಎಚ್.ಆರ್. ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಯ ನೆಲಮಹಡಿ ನಿರ್ಮಾಣದ ಜವಾಬ್ದಾರಿ ಹೊತ್ತ ಝಕರಿಯಾ ಜೋಕಟ್ಟೆ ಹಾಗೂ ತರಗತಿ ಪ್ರಾರಂಭಕ್ಕೆ ಅಹರ್ನಿಶಿ ಶ್ರಮಿಸಿದ ಹಿದಾಯತ್ ಅಡ್ಡೂರು ಅವರ ತಂಡದ ಕಾರ್ಯಕ್ಕೆ ಶ್ಲಾಘಿಸಿದರು.
ಅಡ್ಡೂರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮುಹಮ್ಮದ್ ಅಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯು.ಪಿ.ಇಬ್ರಾಹೀಂ, ಮುಹಮ್ಮದ್ ಅಶ್ರಫ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಲೀಲಾವತಿ, ಅಡ್ಡೂರು ಸೆಂಟ್ರಲ್ ಕಮಿಟಿಯ ಅಬ್ದುಲ್ ರಝಾಕ್, ಬಾಲಕೃಷ್ಣ ರಾವ್ ನೂಯಿ ಮತ್ತಿತರರು ಉಪಸ್ಥಿತರಿದ್ದರು.

