Monday, December 23, 2024

ಧರ್ಮಸ್ಥಳ: ನಾಳೆಯಿಂದ ಲಕ್ಷದೀಪೋತ್ಸವ ಸಂಭ್ರಮ

by eesamachara
0 comment

ಬೆಳ್ತಂಗಡಿ: ಎಂಟು ಶತಮಾನಗಳ ಇತಿಹಾಸ ಮತ್ತು ಪರಂಪರೆ ಹೊಂದಿರುವ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ವಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ  ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನ.26ರಿಂದ 30ರ ವರೆಗೆ ನಡೆಯಲಿವೆ.

ನಾಳೆ (ನ.26) ರಾತ್ರಿ ಹೊಸಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ.  ಮಧ್ಯಾಹ್ನ 3 ಗಂಟೆಗೆ ಸುಮಾರು 25 ಸಾವಿರ ಭಕ್ತರು, ಅಭಿಮಾನಿಗಳು ಉಜಿರೆಯಿಂದ ಧರ್ಮಸ್ಥಳಕ್ಕೆ ಭಜನೆ, ದೇವರ ನಾಮಸ್ಮರಣೆಯೊಂದಿಗೆ ಪಾದಯಾತ್ರೆಯಲ್ಲಿ ಸಾಗಲಿದ್ದಾರೆ. ಶಾಸಕ ಹರೀಶ್ ಪೂಂಜ, ವಿಧಾನಪರಿಷತ್‌ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಪಾದಯಾತ್ರೆಯಲ್ಲಿ ಭಾಗವಹಿಸುವರು. ಸಂಜೆ 7 ಗಂಟೆಗೆ ಹೆಗ್ಗಡೆ ಅವರು ಅಮೃತವರ್ಷಿಣಿ ಸಭಾಭವನದಲ್ಲಿ ಭಕ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ನ.28ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5.30ರಿಂದ 7 ಗಂಟೆ ವರೆಗೆ ನಾಗಸ್ವರ ವಾದನ, 7ರಿಂದ 8ರ ವರೆಗೆ ಸಾತ್ವಿಕ ಸಂಗೀತ, ಬಳಿಕ ನೃತ್ಯಾರ್ಚನೆ ಮತ್ತು ಮಾಯಾವಿಲಾಸ ನೃತ್ಯರೂಪಕ ನಡೆಯಲಿದೆ.

ನ. 29ರಂದು ಸರ್ವಧರ್ಮ ಸಮ್ಮೇಳನ: ಅಮೃತವರ್ಷಿಣಿ ಸಭಾಭವನದಲ್ಲಿ ನ.29ರಂದು ಸಂಜೆ 5 ಗಂಟೆಯಿಂದ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದ್ದು, ರಾಜ್ಯ ಗೃಹ ಸಚಿವ ಡಾ| ಜಿ.ಪರಮೇಶ್ವರ ಉದ್ಘಾಟಿಸುವರು. ಬೆಂಗಳೂರು ರಾಜರಾಜೇಶ್ವರೀ ನಗರದ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬಳಿಕ ಸಂಶೋಧಕ ಡಾ| ಜಿ.ಬಿ.ಹರೀಶ, ಡಾ| ಜೋಸೆಫ್ ಎನ್.ಎಂ., ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಅವರಿಂದ ಉಪನ್ಯಾಸ ನೀಡಲಿದ್ದಾರೆ.

ಸಾಹಿತ್ಯ ಸಮ್ಮೇಳನ: ನ.30ರಂದು ಸಂಜೆ 5 ಗಂಟೆಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದ್ದು, ಬೆಂಗಳೂರು ಬಹುಶ್ರುತ ವಿದ್ವಾಂಸ ಶತಾವಧಾನೀ ಡಾ| ರಾ. ಗಣೇಶ ಉದ್ಘಾಟಿಸುವರು. ಲೇಖಕ, ಸಂಶೋಧಕ ಡಾ| ಪಾದೇಕಲ್ಲು ವಿಷ್ಣು ಭಟ್ಟ ಅಧ್ಯಕ್ಷತೆ ವಹಿಸುವರು. ಬಳಿಕ ಡಾ | ಪ್ರಮೀಳಾ ಮಾಧವ, ಡಾ| ಬಿ.ವಿ.ವಸಂತ ಕುಮಾರ್, ಪ್ರೊ| ಮೊರಬದ ಮಲ್ಲಿಕಾರ್ಜುನ ಅವರಿಂದ ಉಪನ್ಯಾಸ ನಡೆಯಲಿದೆ. ರಾತ್ರಿ 8.30ರಿಂದ ಶ್ರೀ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮವಿದೆ.

ಪ್ರತಿದಿನ ಸಂಜೆ 6.30ರಿಂದ ರಾತ್ರಿ 11ರ ವರೆಗೆ ವಸ್ತು ಪ್ರದರ್ಶನ ಮಂಟಪ ಹಾಗೂ ಅಮೃತವರ್ಷಿಣಿ ವೇದಿಕೆಯಲ್ಲಿ ಸಾಂಸ್ಕೃತಿಕ-ಸಂಗೀತ ಹಬ್ಬ ನೆರವೇರಲಿದೆ.

ಲಕ್ಷದೀಪೋತ್ಸವ ಉತ್ಸವಗಳು: ಲಕ್ಷದೀಪೋತ್ಸವ ಪ್ರಯುಕ್ತ ಮಂಜುನಾಥ ಸ್ವಾಮಿಗೆ ನ.26ರಂದು ಹೊಸಕಟ್ಟೆ ಉತ್ಸವ, 27ರಂದು ಕೆರೆ ಕಟ್ಟೆ ಉತ್ಸವ, 28ರಂದು ಲಲಿತೋದ್ಯಾನ ಉತ್ಸವ, 29ರಂದು ಕಂಚಿಮಾರು ಕಟ್ಟೆ ಉತ್ಸವ, 30ರಂದು ಗೌರಿಮಾರು ಕಟ್ಟೆ ಉತ್ಸವ (ಲಕ್ಷದೀಪೋತ್ಸವ).

ಹೆಚ್ಚಿನ ಮಾಹಿತಿಗೆ ದೇವಳ ಕಚೇರಿ ದೂ: 08256 266655 ಸಂಪರ್ಕಿಸಬಹುದು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios