ಅಡ್ಡೂರು: ಅಡ್ಡೂರು ಮಿನಿ ಪಾಕಿಸ್ತಾನ ಹೇಳಿಕೆ ನೀಡಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರ ಬಂಧನಕ್ಕೆ ಆಗ್ರಹಿಸಿ ಅಡ್ಡೂರು ನಾಗರಿಕ ಸಮಿತಿ ನೇತೃತ್ವದಲ್ಲಿ ರವಿವಾರ ಇಲ್ಲಿನ ಜಂಕ್ಷನ್ ನಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.
ಪ್ರತಿಭಟನಾ ಉದ್ದೇಶಿಸಿ ಮಾತನಾಡಿದ ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಸದಖತುಲ್ಲಾ ಫೈಝಿ, ಶಾಸಕರೇ ತಾವು ನೀಡಿರುವ ವಿವಾದಿತ ಹೇಳಿಕೆಯ ಹಿಂದಿರುವ ನಿಗೂಢ ಉದ್ದೇಶ ಏನು? ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಸಹಬಾಳ್ವೆ ನಡೆಸುತ್ತಿರುವ ಅಡ್ಡೂರಿನಲ್ಲಿ ವೈಷಮ್ಯ, ಅಪನಂಬಿಕೆ, ಸಂಘರ್ಷದ ವಿಷ ಬೀಜ ಬಿತ್ತುವ ದುರುದ್ದೇಶ ಇದೆಯಾ? ಶಾಸಕರ ಬಿತ್ತುವ ವಿಷಬೀಜ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಅಡ್ಡೂರಿನಲ್ಲಿ ಮೊಳಕೆ ಹೊಡೆಯುವುದಿಲ್ಲ. ಇದಕ್ಕೆ ಅಡ್ಡೂರಿನ ಸರ್ವ ಧರ್ಮದ ನಾಗರಿಕರೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಜನಪ್ರತಿನಿಧಿಗಳ ಮಾತಿನಲ್ಲಿ ನಂಬಿಕೆ-ಪ್ರೀತಿ-ವಿಶ್ವಾಸ ಇರಬೇಕು. ತನ್ನ ಕ್ಷೇತ್ರದ ಜನರ ಮಧ್ಯೆ ಬಿರುಕು ಮೂಡಿಸಲು ವಿಭಜನಕಾರಿ ಹೇಳಿಕೆ ನೀಡಿ ಅಶಾಂತಿಗೆ ಸೃಷ್ಟಿಸಲು ಪ್ರಯತ್ನಿಸುವ ಶಾಸಕ ಭರತ್ ಶೆಟ್ಟಿ ಹೇಳಿಕೆ ಖಂಡನೀಯ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹೀಂ ಮಾತನಾಡಿ, ಶಾಸಕ ಭರತ್ ಶೆಟ್ಟಿ ಅವರು ಅಧಿಕಾರ ಸ್ವೀಕರಿಸುವಾಗ ಜಾತಿ-ಧರ್ಮ ಮೀರಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಪ್ರಮಾಣ ವಚನ ಮಾಡಿದ್ದಾರೆ. ಆದರೆ ಇಂದು ಮತಕ್ಕಾಗಿ ಜನರ ಮಧ್ಯೆ ದ್ವೇಷ ಉಂಟು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ಹೆಚ್ಚು ಕಾಲ ನಡೆಯುವುದಿಲ್ಲ. ಇಲ್ಲಿನ ಬೂತ್ ಗಳಲ್ಲಿ ಭರತ್ ಶೆಟ್ಟಿ ಅವರು ಮತಪಡೆದಿದ್ದಾರೆ. ಹಾಗಾದರೆ ಅವರಿಗೆ ಮತ ನೀಡಿದ ಮತದಾರರು ಪಾಕಿಸ್ತಾನಿಯರೇ? ಎಂದು ಪ್ರಶ್ನಿಸಿದರು.
ಜನಪ್ರತಿನಿಧಿಯಾಗಿ ಪ್ರಮಾಣಿಕವಾಗಿ ಕೆಸಲ ಮಾಡಿ. ಧರ್ಮವನ್ನು ಎತ್ತಿಕಟ್ಟಿ ರಾಜಕೀಯ ಲಾಭ ಪಡೆಯುವುದನ್ನು ಬಿಟ್ಟುಬಿಡಿ. ದ್ವೇಷ ರಾಜಕೀಯದಿಂದ ಹೆಚ್ಚು ಮತ ಪಡೆಯಬಹುದು ಎಂದು ಭಾವಿಸಿದ್ದೀರಿ. ಅದು ಮಂಗಳೂರು ಉತ್ತರ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಅಡ್ಡೂರಿನಲ್ಲಿ ಮುಸ್ಲಿಮರು ಹೆಚ್ಚಾಗಿದ್ದಾರೆಂದು ಶಾಸಕರು ಇದುವರೆಗೆ ಇಲ್ಲಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಬಿಜೆಪಿಯಲ್ಲಿ ಅಲ್ಪಸಂಖ್ಯಾತ ಮೋರ್ಚ ಯಾಕೆ ಇಟ್ಟುಕೊಂಡಿದ್ದೀರಿ? ಅದನ್ನು ಕೂಡಲೇ ಬರ್ಕಸ್ ಮಾಡಲಿ ಎಂದು ಟೀಕಿಸಿದ ಅವರು, ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಜ್ಪೆ ಪೊಲೀಸ್ ಠಾಣೆವರೆಗೆ ಪಾದಯಾತ್ರೆ ನಡೆಸಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಮುಖಂಡ ಅಶ್ರಫ್ ನಡುಗುಡ್ಡೆ ಮಾತನಾಡಿ, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಶೂನ್ಯವಾಗಿದೆ. ಶಾಸಕರು ಕೋಮು ಪ್ರಚೋದಕ ಹೇಳಿಕೆಗಳ ಮೂಲಕ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ತಯಾರಿ ನಡೆಸುತ್ತಿದ್ದಾರೆ. ಬಿಜೆಪಿಗರು ಅಭಿವೃದ್ಧಿ ತೋರಿಸಿ ಚುನಾವಣೆ ಎದುರಿಸುತ್ತಾರೆ ಎಂದು ಕಿಡಿಕಾರಿದರು.
ಅಡ್ಡೂರು ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ ಅಂಗಡಿ ಮನೆ, ಉಪಾಧ್ಯಕ್ಷ ಎ.ಕೆ. ಅಶ್ರಫ್, ದ.ಕ. ಜಿಲ್ಲಾ ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಹಾಜಿ ಎಂ.ಎಚ್. ಮೊಹಿಯ್ದೀನ್, ಅಡ್ಡೂರು ಅಲ್ ಬಿರ್ರ್ ಅಧ್ಯಕ್ಷ ಎಂ.ಎಸ್. ಶೇಖಬ್ಬ, ಜಾಬಿರ್ ಫೈಝಿ, ಕಾಂಜಿಲಕೋಡಿ ಮಸೀದಿ ಅಧ್ಯಕ್ಷ ಝಕರಿಯಾ, ಜಯಲಕ್ಷ್ಮೀ, ತೋಕೂರು ಅಹ್ಮದ್ ಬಾವ, ಅರ್ಷದಿ ಉಸ್ತಾದ್, ಡಿ.ಎಸ್. ರಫೀಕ್ ಗುರುಪುರ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬದ್ರಿಯಾ ಜುಮಾ ಮಸೀದಿ ಉಪಾಧ್ಯಕ್ಷ ಝೈನುದ್ದೀನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಸ್ತಾರ್ ಅಡ್ಡೂರು ಕಾರ್ಯಕ್ರಮ ನಿರೂಪಿಸಿದರು.