ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಹಾಗೂ ವಿಶೇಷಾಧಿಕಾರಿ ಎಂದೆಲ್ಲ ಹೇಳಿಕೊಂಡು ಅಧಿಕಾರಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯೋರ್ವನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತುಮಕೂರು ಮೂಲದ ರಘುನಾಥ್ ಎಂದು ಗುರುತಿಸಲಾಗಿದೆ.
ಆರೋಪಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ವರ್ಗಾವಣೆ ಮಾಡಿಸಿಕೊಡುವುದಾಗಿ ಆಮಿಷವೊಡ್ಡಿ ಹಣ ಪಡೆದು ವಂಚಿಸುತ್ತಿದ್ದ. ಸಚಿವ ಪ್ರಿಯಾಂಕ್ ಖರ್ಗೆಯವರ ಹೆಸರನ್ನು ಹೇಳಿಕೊಂಡು ಇತ್ತೀಚೆಗೆ ರಘುನಾಥ್ ಇಂಜಿನಿಯರ್ ಒಬ್ಬರಿಗೆ ಕರೆ ಮಾಡಿದ್ದ. ಬಳಿಕ ವರ್ಗಾವಣೆ ಮಾಡಿಸಿಕೊಡುವುದಾಗಿ 2 ಲಕ್ಷ ರೂ. ಬೇಡಿಕೆ ಇಟ್ಟಿದ್ದ. ಈತನ ಮಾತನ್ನು ನಂಬಿದ್ದ ಇಂಜಿನಿಯರ್ 80 ಸಾವಿರ ರೂ. ಹಣ ಕೊಟ್ಟಿದ್ದರು. ಬಳಿಕ ಈತನ ವಂಚನೆ ಬಗ್ಗೆ ತಿಳಿದು ಸಚಿವರ ಆಪ್ತ ಕಾರ್ಯದರ್ಶಿಗಳು ದೂರು ನೀಡಿದ್ದರು ಎಂದು ತಿಳಿದು ಬಂದಿದೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ಒಳಪಡಿಸಿದ್ದಾರೆ.