ಮಂಗಳೂರು: ಗ್ರಾಮ ಪಂಚಾಯತ್ ಉಪಚುನಾವಣೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಆಯೋಜಿಸಿದ ಪಿಲಿಕುಳ “ನೇತ್ರಾವತಿ- ಫಲ್ಗುಣಿ” ಜೋಡುಕರೆ ಕಂಬಳ ಬಹುತೇಕ ಮುಂದೂಡುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ಹತ್ತು ವರ್ಷಗಳ ಬಳಿಕ ಪಿಲಿಕುಳದ ಜೋಡುಕರೆಯಲ್ಲಿ ನ. 17 ಮತ್ತು 18ರಂದು ಬಹು ನಿರೀಕ್ಷಿತ “ನೇತ್ರಾವತಿ- ಫಲ್ಗುಣಿ” ಹೆಸರಲ್ಲಿ ಕಂಬಳ ಆಯೋಜಿಸಿದೆ. ಈ ನಡುವೆ ನ.23ರಂದು ಪಿಲಿಕುಳ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಇನ್ನೂ ಕಂಬಳ ಆಯೋಜಿಸಿದರೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ.
ಕಂಬಳ ಮುಂದೂಡಿಕೆಯಾದರೆ ನ.17ರಂದು ಪೂರ್ವಭಾವಿ ಕುದಿ ಕಂಬಳ ಆಯೋಜಿಸುವ ಬಗ್ಗೆಯೂ ಚಿಂತನೆ ನಡೆದಿದ್ದು, ಕಂಬಳದ ಮುಂದಿನ ದಿನಾಂಕವೂ ಅಂತಿಮಪಡಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.
ಇಂದು ಜಿಲ್ಲಾಡಳಿತ ಕಂಬಳ ಸಮಿತಿಯವರ ಸಭೆ ಕರೆದಿದ್ದು, ಇದರಲ್ಲಿ ತೀರ್ಮಾನವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿರುವ ಸಂಸ್ಕೃತಿ ಗ್ರಾಮದ ಗುತ್ತುಮನೆಯ ಮುಂಭಾಗದ ಬಾಕಿಮಾರು ಗದ್ದೆಯಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುವ “ನೇತ್ರಾವತಿ-ಫಲ್ಗುಣಿ’ ಜೋಡುಕರೆ ಕಂಬಳ ಆರಂಭವಾಗಿದ್ದು 2008 ರಲ್ಲಿ. ಬಳಿಕ 2014 ರವರೆಗೆ ಸಾಗಿತ್ತು. ಕಾನೂನಾತ್ಮಕ ತೊಡಕು ಎದುರಾಗಿ ಇಲ್ಲಿನ ಜೋಡುಕರೆಯಲ್ಲಿ ಕೋಣಗಳ ಓಟಕ್ಕೆ ಅವಕಾಶ ಸಿಕ್ಕಿರಲಿಲ್ಲ.