ಬಳ್ಳಾರಿ: ನಾವು ಯಾವ ಹಗರಣವನ್ನೂ ಮಾಡಿಲ್ಲ. ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ರಾಜಕೀಯ ದುರುದ್ದೇಶದಿಂದ ಮತ್ತೆ ಅದನ್ನು ಕೆದಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ನ್ಯಾ.ಜಾನ್ ಮೈಕಲ್ ಕುನ್ಹಾ ಆಯೋಗ ಕೋವಿಡ್ ಹಗರಣವನ್ನು ಪ್ರಾಸಿಕ್ಯೂಶನ್ ಗೆ ಶಿಫಾರಸು ಮಾಡಿರುವ ವಿಚಾರದ ಬಗ್ಗೆ ಶನಿವಾರ ಸಂಡೂರಿನ ತಾಲೂಕಿನ ತೋರಣಗಲ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನನ್ನ ಅಧಿಕಾರಾವಧಿಯಲ್ಲಿ ಯಾವ ಹಗರಣವೂ ನಡೆದಿಲ್ಲ. ಪ್ರಾಸಿಕ್ಯೂಷನ್ಗೆ ಶಿಫಾರಸು ಮಾಡಿರುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಎಲ್ಲವನ್ನೂ ನಾವು ಕಾನೂನು ಚೌಕಟ್ಟಿನಲ್ಲಿ ಅನುಷ್ಠಾನ ಮಾಡಿದ್ದೇವೆ. ಅದು ತುಂಬಾ ಹಳೇಯದು. ಅದರಿಂದ ಅವರಿಗೆ ಲಾಭ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅದರಿಂದ ಅವರಿಗೇನೂ ಲಾಭ ಆಗುವುದಿಲ್ಲ” ಎಂದು ಹೇಳಿದರು.
“ದುರುದ್ದೇಶ ಪೂರಕವಾಗಿ ಕೇಸ್ ದಾಖಲಿಸುವುದು, ವಿಚಾರಣೆಗೆ ಅನುಮತಿ ನೀಡುವುದು ನಡೆದಿದೆ. ರಾಜ್ಯ ಸರ್ಕಾರದ ಈ ಬೆದರಿಕೆಗೆ ಯಡಿಯೂರಪ್ಪ ಬಗ್ಗಲ್ಲ, ಜಗ್ಗಲ್ಲ. ಶ್ರೀರಾಮುಲು ಕೋವಿಡ್ನಲ್ಲಿ ಯಾವುದೇ ಹಗರಣ ಮಾಡಿಲ್ಲ. ಎಲ್ಲವನ್ನೂ ನಾವು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇವೆ” ಎಂದು ನುಡಿದರು.