Monday, December 23, 2024

ಸಂವಿಧಾನ ಅಂಗೀಕರಿಸಿ 75 ವರ್ಷ| ನಾಳೆ ಶಾಸಕರ ಭವನದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ: ಸಿಎಂ ಸಿದ್ದರಾಮಯ್ಯ ಚಾಲನೆ

by eesamachara
0 comment


ಬೆಂಗಳೂರು: ಇಡೀ ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನ ಎಂಬ ಹೆಗ್ಗಳಿಕೆ ಪಡೆದಿರುವ ಭಾರತದ ಸಂವಿಧಾನ ಅಂಗೀಕಾರಗೊಂಡು 75 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ವಿಶ್ವಗುರು ಬುದ್ಧ ಪ್ರೊಡಕ್ಷನ್ಸ್ ಸಂಸ್ಥೆ ವತಿಯಿಂದ ನ.26ರಂದು ʻಸಂವಿಧಾನ ದಿನʼದ ಹಿನ್ನೆಲೆಯಲ್ಲಿ ಸಂವಿಧಾನದ ಅಮೃತ ಮಹೋತ್ಸವ ಕಾರ್ಯಕ್ರಮ ವಿಧಾನಸೌಧದ ಶಾಸಕರ ಭವನದಲ್ಲಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಶಾಸಕರ ಭವನದ ಆವರಣದಲ್ಲಿ ಭರದ ಸಿದ್ಧತೆ ನಡೆದಿದೆ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿಶ್ವಗುರು ಬುದ್ಧ ಪ್ರೊಡಕ್ಷನ್ಸ್ (ರಿ.) ಸಂಸ್ಥೆಯು ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಪ್ರಧಾನ ನಿರ್ದೇಶಕ ಅರುಣಕುಮಾರ್ ನಾಗರಾಜ ದಿವಾಣಜಿ ಮತ್ತು ವ್ಯವಸ್ಥಾಪಕ ಕನ್ನಾಯಕನಹಳ್ಳಿ ಕುಮಾರ್ ರಾಮೇಗೌಡ ತಿಳಿಸಿದ್ದಾರೆ.  

ನಾಳೆ ಬೆಳಿಗ್ಗೆ 12 ಗಂಟೆಗೆ ಶಾಸಕರ ಭವನದ ಆವರಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ಘನ ಉಪಸ್ಥಿತಿ ಇರಲಿದ್ದು, ಅವರು ಸಂವಿಧಾನ ಪೀಠಿಕೆ ಬೋಧನೆ ಮಾಡಲಿದ್ದಾರೆ. 

ಇದೇ ವೇಳೆ ವಿಶ್ವಗುರು ಬುದ್ಧ ಪ್ರೊಡಕ್ಷನ್ಸ್ (ರಿ.) ಪ್ರಸ್ತುತಿಯ ʻಮನೆ ಮನಕೆ ಸಂವಿಧಾನʼ ಎಂಬ ಸಂವಿಧಾನ ಗೀತೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ, ಸಂವಿಧಾನ ಕುರಿತು ನಿರ್ಮಾಣಗೊಂಡಿರುವ ಸಾಕ್ಷ್ಯಚಿತ್ರವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 1200 ಚದರ ಅಡಿಯ ಬೃಹತ್ ಕಲಾಕೃತಿಯನ್ನು ಗೃಹ ಸಚಿವ ಜಿ. ಪರಮೇಶ್ವರ್, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅನಾವರಣಗೊಳಿಸಲಿದ್ದಾರೆ. 

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಗೌರವಾನ್ವಿತ ಸಚಿವರುಗಳು, ವಿರೋಧ ಪಕ್ಷದ ನಾಯಕರುಗಳು, ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು, ಮಾಜಿ ಸಚಿವರುಗಳು, ಮಾಜಿ ಶಾಸಕರುಗಳು ಮತ್ತು ಆಡಳಿತಾತ್ಮಕ ಮುಖ್ಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಗಳ ಭಾಗವಾಗಿ ನವೆಂಬರ್ 18 ಮತ್ತು ನವೆಂಬರ್ 19ರಂದು ಶಾಸಕರ ಭವನದ ಆವರಣದಲ್ಲಿ ಸುಮಾರು 20 ಮಂದಿ ಖ್ಯಾತ ಚಿತ್ರ ಕಲಾವಿದರು 30 ಅಡಿ ಎತ್ತರ, 40 ಅಡಿ ಅಗಲದ ಒಟ್ಟು 1200 ಚದರ ಅಡಿಯ ಬೃಹತ್ ಕ್ಯಾನ್ವಾಸ್ ಮೇಲೆ ಭಾರತದ ಪ್ರಜಾಪ್ರಭುತ್ವದ ಪಿತಾಮಹ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ಬೃಹತ್ ಕಲಾಕೃತಿಯನ್ನು ಸುಮಾರು 13 ಗಂಟೆಗಳ ಕಾಲ ʻಲೈವ್ ಪೈಂಟಿಂಗ್ʼ ಮಾಡಿ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ ನಡೆಸಿದ್ದಾರೆ.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios