ದಿಲ್ಲಿ: “ನ್ಯಾಯದ ಹೆಸರಿನಲ್ಲಿ ಆರೋಪಿಗಳ ಮತ್ತು ತಪ್ಪಿತಸ್ಥರ ಮನೆಗಳನ್ನು ನೆಲಸಮ ಮಾಡುವುದು ಅಸಾಂವಿಧಾನಿಕ” ಎಂದು ಸುಪ್ರೀಂ ಕೋರ್ಟ್ ಬುಧವಾರ ಬುಲ್ಡೋಝರ್ ಕಾರ್ಯಾಚರಣೆ ಸಂಬಂಧ ಮಹತ್ವದ ತೀರ್ಪು ನೀಡಿದೆ.
ಉತ್ತರ ಪ್ರದೇಶದ ಬುಲ್ಡೋಝರ್ ನ್ಯಾಯದ ಸಾಂವಿಧಾನಿಕ ಸಿಂಧುತ್ವದ ಕುರಿತು ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಕೆ.ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಮನೆಗಳನ್ನು ನೆಲಸಮ ಮಾಡಿರುವುದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದೆ.
“ಬುಲ್ಡೋಝರ್ ಗಳನ್ನು ನಿರಂಕುಶವಾಗಿ ಬಳಸಿದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಅಪರಾಧಕ್ಕೆ ಶಿಕ್ಷೆ ನೀಡುವುದು ನ್ಯಾಯಾಲಯದ ಕೆಲಸ. ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕುಟುಂಬವನ್ನು ಶಿಕ್ಷಿಸಲು ಸಾಧ್ಯವಿಲ್ಲ. ಒಬ್ಬನೇ ಆರೋಪಿಯಾಗಿದ್ದರೆ ಇಡೀ ಕುಟುಂಬದಿಂದ ಮನೆಯನ್ನು ಏಕೆ ಕಳೆದುಕೊಳ್ಳಬೇಕು? ಆರೋಪಿ ಮತ್ತು ಶಿಕ್ಷೆಗೊಳಗಾದವರಿಗೂ ಕೆಲವು ಹಕ್ಕುಗಳಿವೆ. ಆರೋಪಿ ಎಂಬ ಕಾರಣಕ್ಕೆ ಮನೆ ಕೆಡವುವುದು ಕಾನೂನು ಉಲ್ಲಂಘನೆಯಾಗುತ್ತದೆ. ಪೂರ್ವಭಾವಿ ಶೋಕಾಸ್ ನೋಟಿಸ್ ನೀಡದೆ ಮತ್ತು ನೋಟಿಸ್ ಜಾರಿ ಮಾಡಿದ 15 ದಿನಗಳ ಒಳಗಾಗಿ ಯಾವುದೇ ಕಟ್ಟಡವನ್ನು ಕೆಡವಬಾರದು” ಪೀಠ ಸೂಚಿಸಿದೆ.
“ನೋಟಿಸ್ ಅನ್ನು ಮಾಲೀಕರಿಗೆ ನೋಂದಾಯಿತ ಅಂಚೆ ಮೂಲಕ ನೀಡಬೇಕು. ಅನಧಿಕೃತ ಕಟ್ಟಡವಾಗಿದ್ದರೆ ನಿರ್ಮಾಣದ ಸ್ವರೂಪ, ನಿರ್ದಿಷ್ಟ ಉಲ್ಲಂಘನೆಯ ವಿವರಗಳನ್ನು ನೋಟಿಸ್‌ನಲ್ಲಿ ಉಲ್ಲೇಖಿಸಬೇಕು, ಆಕ್ಷೇಪಣೆ ಸಲ್ಲಿಸಲು ಆರೋಪಿಯ ಮನೆಯವರಿಗೆ ಅವಕಾಶ ನೀಡಬೇಕು. ಕಟ್ಟಡ ತೆರವು ಕಾರ್ಯಚರಣೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಬೇಕು. ಸಾರ್ವಜನಿಕ ಭೂಮಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣವಾದರೆ ಅಂತಹ ಸಮಯದಲ್ಲಿ ನಿರ್ದೇಶನ ಅನ್ವಯವಾಗುವುದಿಲ್ಲ” ಎಂದು ಕೋರ್ಟ್ ಸ್ಪಷ್ಡವಾಗಿ ತಿಳಿಸಿದೆ.