ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಮಾ.15ರಂದು ನಿಗದಿಪಡಿಸಿದೆ.
ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಆರೋಪ ಪಟ್ಟಿಯ ವಿಚಾರಣೆಗೆ ಕೋರ್ಟ್ ಸಮ್ಮತಿಸಿದ್ದು, ಮಾರ್ಚ್ 15 ರಂದು ಖುದ್ದಾಗಿ ಹಾಜರಾಗುವಂತೆ ಬಿ.ಎಸ್ ಯಡಿಯೂರಪ್ಪ ಹಾಗೂ ಇತರ ಆರೋಪಿಗಳಿಗೆ ಸಮನ್ಸ್ ನೀಡಿದೆ.
ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ಕೆಲವೇ ದಿನಗಳ ಹಿಂದಷ್ಟೇ ಕರ್ನಾಟಕ ಹೈಕೋರ್ಟ್ನಲ್ಲಿ ರಿಲೀಫ್ ದೊರೆತಿತ್ತು. ಪ್ರಕರಣ ರದ್ದತಿ ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಧಾರವಾಡ ಪೀಠ, ನಿರೀಕ್ಷಣಾ ಜಾಮೀನು ನೀಡಿತ್ತು. ಆದರೆ, ಪ್ರಕರಣ ರದ್ದು ಮಾಡಲು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ನಿರಾಕರಿಸಿತ್ತು. ಹೀಗಾಗಿ ಯಡಿಯೂರಪ್ಪ ಬಂಧನದಿಂದ ಪಾರಾದರೂ ವಿಚಾರಣೆ ಎದುರಿಸಲೇಬೇಕಾಗಿದೆ. ಆದ್ದರಿಂದ ಇದೀಗ ಬೆಂಗಳೂರಿನ ನ್ಯಾಯಾಲಯ ವಿಚಾರಣೆಗೆ ದಿನ ನಿಗದಿಪಡಿಸಿದೆ.
ಪ್ರಕರಣದ ಹಿನ್ನೆಲೆ: ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ 2024ರ ಮಾರ್ಚ್ನಲ್ಲಿ ಕೇಳಿಬಂದಿತ್ತು. ಸಂತ್ರಸ್ತೆಯ ತಾಯಿ ಈ ಆರೋಪ ಮಾಡಿದ್ದರು. ಸಹಾಯ ಕೇಳಲು ಹೋಗಿದ್ದಾಗ ತನ್ನ ಮಗಳಿಗೆ ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸಂತ್ರಸ್ತೆಯು ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಬಗ್ಗೆ ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದು ಕೆಲವು ದಿನಗಳ ಮಟ್ಟಿಗೆ ರಾಜಕೀಯವಾಗಿಯೂ ಸದ್ದು ಮಾಡಿತ್ತು. ಏತನ್ಮಧ್ಯೆ, ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ದೂರುದಾರೆ 2024ರ ಮೇ ತಿಂಗಳಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು.