ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಫ್ಎಸ್ಎಲ್ ವರದಿ ಬಂದಿದ್ದು, ಜಾತಿ ನಿಂದನೆ ಮಾಡಿರುವ ಆಡಿಯೋ ಮುನಿರತ್ನ ಅವರದ್ದೇ ಎಂದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿದೆ.
ಶಾಸಕರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರ ವೇಲು ನಾಯ್ಕರ್ ಅವರು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೇ, ಮುನಿರತ್ನ ನಿಂದನೆ ಮಾಡಿದ್ದ ಆಡಿಯೋವನ್ನು ಪೊಲೀಸರಿಗೆ ನೀಡಿದ್ದರು. ಈ ದೂರಿನ ಮೇರೆಗೆ ಮುನಿರತ್ನ ವಿರುದ್ಧ ಸೆ.13 ರಂದು ಎಫ್‌ಐಆರ್ ದಾಖಲಾಗಿತ್ತು.
ಬಳಿಕ ಮುನಿರತ್ನ ಅವರನ್ನು ಸೆ.14ರಂದು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದರು. ಅದಾದ ನಂತರ ಮುನಿರತ್ನ ಅವರ ವಿರುದ್ಧ ಅತ್ಯಾಚಾರ ಆರೋಪದ ಅಡಿ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿತ್ತು. ಎರಡೂ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್‌ಐಟಿಗೆ ವರ್ಗಾವಣೆ ಮಾಡಿತ್ತು.
ದೂರುದಾರರು ನೀಡಿದ ಆಡಿಯೊ ಕ್ಲಿಪ್ ಹಾಗೂ ಬಂಧನದ ವೇಳೆ ಪಡೆಯಲಾಗಿದ್ದ ಶಾಸಕ ಮುನಿರತ್ನ ವಾಯ್ಸ್ ಸ್ಯಾಂಪಲ್ ಅನ್ನು ಎಸ್‌ಐಟಿ ಪೊಲೀಸರು ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದ್ದರು. ಇದೀಗ ಅದರ ವರದಿ ಬಂದಿದ್ದು, ಆಡಿಯೋದಲ್ಲಿ ಇರುವುದು ಮುನಿರತ್ನ ಅವರದ್ದೇ ಧ್ವನಿ ಎಂದು ದೃಢವಾಗಿದೆ. ತಜ್ಞರ ವರದಿ ತನಿಖಾಧಿಕಾರಿಗಳ ಕೈಸೇರಿದೆ ಎಂದು ಮೂಲಗಳು ತಿಳಿಸಿವೆ.