ವಿಜಯಪುರ: ರಾಜ್ಯದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದರಿಂದ ಆಘಾತಗೊಂಡು ಬಿಜೆಪಿ ಹಿರಿಯ ಮುಖಂಡನೋರ್ವ ಟಿವಿಯನ್ನು ಒಡೆದು ಹಾಕಿರುವ ಘಟನೆ ಕೊಲ್ಹಾರ ಪಟ್ಟಣದಲ್ಲಿ ನಡೆದಿದೆ.
ಕೊಲ್ಹಾರ ಪಟ್ಟಣದ 4ನೇ ವಾರ್ಡಿನ ನಿವಾಸಿ, ಬಿಜೆಪಿಯ ಕಟ್ಟಾ ಅಭಿಮಾನಿಯಾಗಿರುವ ವೀರಭದ್ರಪ್ಪ ಬಾಗಿ ಅವರು ಮನೆಯಲ್ಲಿ ಉಪಚುನಾವಣೆಯ ಫಲಿತಾಂಶ ವೀಕ್ಷಿಸುತ್ತಿದ್ದರು. ಈ ವೇಳೆ ಬಿಜೆಪಿಗೆ ಮೂರು ಕ್ಷೇತ್ರಗಳಲ್ಲಿ ಸೋಲಾಗಿರುವುದನ್ನು ಕಂಡು ರಾಜ್ಯ ವಿನಾಯಕರ ನಡೆಗೆ ಆಕ್ರೋಶಿತರಾಗಿ ಟಿವಿಯನ್ನು ಎತ್ತಿತಂದು ಹೊರ ಬಿಸಾಡಿ ಒಡೆದು ಹಾಕಿದ್ದಾರೆ.
“ರಾಜ್ಯದ ಬಿಜೆಪಿ ನಾಯಕರಲ್ಲಿ ಹೊಂದಾಣಿಕೆ ಇಲ್ಲದ ಕಾರಣ ನಮಗೆ ಸೊಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಜೆಪಿ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಹಾಗೂ ಇತರ ನಾಯಕರಲ್ಲಿ ಹೊಂದಾಣಿಕೆಯ ಕೊರತೆಯಿಂದ ಇಂತಹ ದುಃಸ್ಥಿತಿ ಬಂದಿದೆ. ರಾಷ್ಟ್ರೀಯ ನಾಯಕರು ಮಧ್ಯಸ್ಥಿಕೆ ವಹಿಸಿ ರಾಜ್ಯ ನಾಯಕರ ಒಗ್ಗೂಡಿಸಬೇಕು ಇಲ್ಲದಿದ್ದಲ್ಲಿ ಬಿಜೆಪಿ ಇನ್ನೂ ದುಸ್ಥಿತಿಗೆ ಹೋಗುತ್ತದೆ” ಎಂದು ವೀರಭದ್ರಪ್ಪ ಅಸಮಾಧಾನ ಹೊರಹಾಕಿದ್ದಾರೆ.