ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸಿದ್ದ ಯುವತಿ ಡೆತ್ನೋಟ್ ಬರೆದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪದ್ಮನಾಭ ನಗರದಲ್ಲಿ ನಡೆದಿದೆ.
ನಗರದ ಪದ್ಮನಾಭನಗರದ ನಿವಾಸಿ ಜೀವಾ(32) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ಗುರುತಿಸಲಾಗಿದೆ.
ಮೃತ ಜೀವಾ ಭೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ಸ್ ಪೂರೈಸುತ್ತಿದ್ದರು. ಭೋವಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಜೀವಾ ಕಳೆದ 3 ತಿಂಗಳ ಹಿಂದೆ ಒಮ್ಮೆ ವಿಚಾರಣೆ ಎದುರಿಸಿದ್ದರು. ಅಕ್ರಮದ ತನಿಖೆ ಮಾಡುತ್ತಿರುವ ಅಧಿಕಾರಿಗಳು ಜೀವಾಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದರು. ಅಲ್ಲದೇ ಕಳೆದ ನಾಲ್ಕು ದಿನಗಳಿಂದ ಸತತವಾಗಿ ವಿಚಾರಣೆಗೆ ಹಾಜರಾಗಿದ್ದರು. ನಿನ್ನೆ ಕೂಡ ವಿಚಾರಣೆಗೆ ಒಳಪಟ್ಟಿದ್ದರು ಎನ್ನಲಾಗಿದೆ.
ಮೃತ ಜೀವಾ 11 ಪುಟಗಳ ಡೆತ್ ನೋಟ್‌ನಲ್ಲಿ ಅಕ್ರಮದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಡಿವೈಎಸ್‌ಪಿ ಹೆಸರು ಬರೆದಿಟ್ಟು ಪದ್ಮನಾಭನಗರದ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ. ಯುವತಿ ಸಹೋದರಿಯ ದೂರಿನ ಮೇರೆಗೆ ನಗರದ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಿಜೆಪಿ ಕಾಲದ ಭೋವಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ತನಿಖೆಗೆ ಸಿದ್ದರಾಮಯ್ಯ ಸರ್ಕಾರ ಸಿಐಡಿಗೆ ನೀಡಿದ್ದು, ಸಿಐಡಿ ಅಧಿಕಾರಿಗಳು ಸಹ ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೆದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಯುವತಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಭಾರೀ ಸಂಚಲನ ಮೂಡಿಸಿದೆ.