ಮಂಗಳೂರು: ವಿಧಾನ ಮಂಡಳ ಚಳಿಗಾಲದ ಅಧಿವೇಶನ ಡಿ.9ರಿಂದ 19ರ ವರೆಗೆ ಮಾತ್ರ ನಡೆಯಲಿದೆ. ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾಗಣಕ್ಕಾಗಿ ಒಂದು ದಿನ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಅಧಿವೇಶವನ್ನು ಡಿ.9ರಿಂದ 20ರ ವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಸಾಹಿತ್ಯ ಸಮ್ಮೇಳನ ಡಿ.20ರಿಂದ ಆರಂಭವಾಗಲಿದೆ. ಮುಖ್ಯಮಂತ್ರಿ ಮತ್ತು ಸಚಿವರು ಅದರಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ರಾಜ್ಯ ಮತ್ತು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗಬೇಕು. ಈ ವಿಷಯದಲ್ಲಿ ಈ ಅಧಿವೇಶನ ಸಫಲವಾದರೆ ನಾವು ಆ ಭಾಗದ ಜನರಿಗೆ ನೀಡುವ ಗೌರವವಾಗುತ್ತದೆ. ಆ ಕಾರಣಕ್ಕಾಗಿ ರಾಜಕೀಯ ತಿಕ್ಕಾಟ ಅಧಿವೇಶನದಲ್ಲಿ ಬೇಡ. ವಿಧಾನಮಂಡಳ ಸುಗಮ ಕಲಾಪಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಉಪ ಚುನಾವಣೆಯಲ್ಲಿ ಜಯಗಳಿಸಿರುವ ಮೂವರು ಶಾಸಕರಿಗೆ ಅಧಿವೇಶನದಲ್ಲಿಯೇ ಪ್ರಮಾಣವಚನ ಬೋಧಿಸಲಾಗುವುದು ಎಂದರು.
ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಯಮದಂತೆ ಸದನ ನಡೆಸುತ್ತೇನೆ. ಸದನ ಸಲಹಾ ಸಮಿತಿಯಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ ಉತ್ತರಿಸಿದರು.