ಮಂಗಳೂರು: ರಾಜಕೀಯ ದುರುದ್ದೇಶದಿಂದ ಎಬಿವಿಪಿ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಗೂಂಡಾಗಿರಿ ನಡೆಸಿದೆ ಎಂದು ದ.ಕ.ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ಸುಹಾನ್ ಆಳ್ವ ತಿಳಿಸಿದ್ದಾರೆ.
“ಅಂಕಪಟ್ಟಿ ವಿಷಯಕ್ಕೆ ಸಂಬಂಧಿಸಿದಂತೆ ಎನ್.ಎಸ್.ಯು.ಐ ಜಿಲ್ಲಾ ಮತ್ತು ಉಳ್ಳಾಲ ಸಮಿತಿ ವತಿಯಿಂದ ಸಭಾಧ್ಯಕ್ಷ ಯು.ಟಿ ಖಾದರ್ ಹಾಗೂ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ ಸುಧಾಕರ್ ಅವರ ಗಮನಕ್ಕೆ ತಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ದಾರೆ. ಆದರೂ ಎಬಿವಿಪಿ ಸಂಘಟನೆಯು ರಾಜಕೀಯ ಲಾಭಕ್ಕೋಸ್ಕರ ವಿಶ್ವವಿದ್ಯಾನಿಲಯ ಆಡಳಿತದ ಸೌಧಕ್ಕೆ ನುಗ್ಗಿ ಹಾನಿ ಮಾಡಿ ಪೊಲೀಸರ ಮೇಲೂ ಹಲ್ಲೆ ನಡೆಸಿದೆ” ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ.
“ಶಿಕ್ಷಣ ಸಂಸ್ಥೆಗಳನ್ನು ದೇವಾಲಯದಂತೆ ಕಾಣುವ ಸಮಾಜದಲ್ಲಿ ಎಬಿವಿಪಿ ಕಾರ್ಯಕರ್ತರ ಈ ವರ್ತನೆಯು ಅವರ ನೈಜ ಮುಖವಾಡವನ್ನು ತೋರಿಸುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಯು ಗೂಂಡಾಗಿರಿ ನಡೆಸಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಸುಹಾನ್ ಆಳ್ವ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಏನಿದು ಘಟನೆ?: ಅಂಕಪಟ್ಟಿಯ ಸಮಸ್ಯೆ, ಅವೈಜ್ಞಾನಿಕವಾಗಿ ಕಾಲೇಜು ಮತ್ತು ಪರೀಕ್ಷಾ ಶುಲ್ಕ ಹೆಚ್ಚಳ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ ವತಿಯಿಂದ ವಿದ್ಯಾರ್ಥಿಗಳು ಶುಕ್ರವಾರ ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಎಬಿವಿಪಿ ನೇತೃತ್ವದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಡಳಿತ ಸೌಧದ ಕಡೆಗೆ ಸಾಗಿ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಬ್ಯಾರಿಕೇಡ್ ಹಾಕಿದ್ದು, ಇದನ್ನು ಕೆಳಹಾಕಿ ಮುನ್ನುಗಿದ್ದರು. ಬಳಿಕ ಪೊಲೀಸರು ಆಡಳಿತ ಸೌಧದ ಗಾಜಿನ ಬಾಗಿಲನ್ನು ಹಾಕಿದ್ದು ವಿದ್ಯಾರ್ಥಿಗಳು ತಳ್ಳಾಟ ನಡೆಸಿದಾಗ ಗಾಜು ಪುಡಿಪುಡಿಯಾಗಿ ಓರ್ವ ಪೋಲೀಸ್ ಹಾಗೂ ವಿದ್ಯಾರ್ಥಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.