ಉತ್ತಮ ಸಮಾಜ ನಿರ್ಮಾಣ ಮಾಡುವುದು ಮಾಧ್ಯಮಗಳ ಗುರಿಯಾಗಬೇಕು. ಆ ನಿಟ್ಟಿನಲ್ಲಿ ಸಾಮಾಜಿಕ ಹೊಣೆಯನ್ನು ಅರಿತು ಸಮಾಜದ ಒಳಿತು ಕೆಡುಕುಗಳನ್ನು ನಿರಂತರವಾಗಿ ಪರಿಶೀಲಿಸುವಂತಾಗಬೇಕು. ಆದರೆ, ಜನರ ಜವಾಬ್ದಾರಿಗಳನ್ನು ಸಾದರಪಡಿಸದ ಕೆಲ ಮಾಧ್ಯಮಗಳು ಸರ್ಕಾರ ಮತ್ತು ಅದರ ಅಧಿಕಾರಸ್ಥ ಬಗೆಗೆ ಮಾತ್ರ ಹೆಚ್ಚು ಒತ್ತು ನೀಡುತ್ತಿರುವುದು ಆರೋಗ್ಯಕರ ಸಮಾಜ ನಿರ್ಮಾಣದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಅಲ್ಲ. ಹೆಚ್ಚಿನ ಮಾಧ್ಯಮಗಳು ಸಮಾಜದಲ್ಲಿನ ನಿರರ್ಥಕ, ಪ್ರಚೋದಕ, ವಿಭಜಕ ಸುದ್ದಿಗಳಿಗೆ ಮಾತ್ರ ಪ್ರಾಧಾನ್ಯ ನೀಡುತ್ತಿದ್ದು, ಧರ್ಮ-ಧರ್ಮಗಳ ಮಧ್ಯೆ ಕ್ಷುಲ್ಲಕ ವಿಚಾರವನ್ನು ದೊಡ್ಡದಾಗಿ ಬಿಂಬಿಸುತ್ತಿದೆ. ಹೊರತು ಜನಸಾಮಾನ್ಯರ ಪ್ರಾಮಾಣಿಕ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ.
ಇಂದು ಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ. ವಾಸ್ತವದಲ್ಲಿ ಮಾಧ್ಯಮಗಳು ಬಿತ್ತರಿಸುವ ಹೆಚ್ಚಿನ ಊಹಾಪೋಹ ವರದಿಗಳು ಸುಳ್ಳಾಗಿದ್ದು, ಸಮಾಜದಲ್ಲಿ ಸೌಹಾರ್ದ, ಶಾಂತಿ, ಸಾಮರಸ್ಯ ಇನ್ನೂ ಕೂಡ ಜೀವಂತವಾಗಿರುವ ನಿದರ್ಶನಗಳು ಸಾಕಷ್ಟಿವೆ. ಹಾಗಾಗಿ, ಸತ್ಯ, ನ್ಯಾಯ, ಸಾಮರಸ್ಯ ಮತ್ತು ಸಮಗ್ರತೆಯ ಪರ ನಿಲ್ಲಲು ನಾಗರಿಕ ಪತ್ರಿಕೋದ್ಯಮ ಮುನ್ನೆಲೆಗೆ ತರುವ ದೃಷ್ಟಿಯಿಂದ ಜನಸಾಮಾನ್ಯರ ಆಶೋತ್ತರಗಳ ಪ್ರತಿನಿಧಿಯಾಗಿ ಸ್ವತಂತ್ರ ಪತ್ರಕರ್ತರು ಸೇರಿ ‘ಈ ಸಮಾಚಾರ’ ಸುದ್ದಿತಾಣವನ್ನು ಹೊರ ತಂದಿದ್ದೇವೆ. ಇಲ್ಲಿ ಜನ ಸಾಮಾನ್ಯರ ಹಿತಾಸಕ್ತಿಯನ್ನು ಎತ್ತಿಹಿಡಿಯುವುದೇ ನಮ್ಮ ಉದ್ದೇಶ. ಆ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಿವುದು ಮತ್ತು ಜನರ ಬೇಡಿಕೆಗಳನ್ನು ಸರ್ಕಾರದ ಮತ್ತು ಆಡಳಿತಯಂತ್ರದ ಗಮನಕ್ಕೆ ತರುವುದಾಗಿದೆ. ಉತ್ತಮ ಸಮಾಜ ನಿರ್ಮಾಣ ಮಾಡುವುದು ನಮ್ಮ ಗುರಿ.
ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯ, ಅನೀತಿ, ಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದು, ದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.