Saturday, April 19, 2025

ಮನೆ ಮನೆಗೂ ನೆಹರೂ, ಗಾಂಧಿ,  ಅಂಬೇಡ್ಕರ್‌ ಚಿಂತನೆ ತಲುಪಿಸಬೇಕು: ಸತೀಶ್ ಜಾರಕಿಹೊಳಿ

ಸ್ವಾತಂತ್ರ್ಯ-ಸಂವಿಧಾನ-ದೂರದೃಷ್ಟಿ

by eesamachara
0 comment

ಮಂಗಳೂರು: ಗಾಂಧೀಜಿಯ ಅಹಿಂಸೆಯ ತತ್ವ ವಿಶ್ವಕ್ಕೆ ಮಾದರಿಯಾಗಿದ್ದರೆ, ಅಂಬೇಡ್ಕರ್‌ರವರು ಸಂವಿಧಾನದ ಮೂಲಕ ನಮಗೆ ರಕ್ಷಣೆ ನೀಡಿದ್ದಾರೆ. ನೆಹರೂರವರ ದೂರದೃಷ್ಟಿಯ ರಾಜಕಾರಣ ವೈಜ್ಞಾನಿಕ ಮನೋಭಾವ ಬೆಳೆಸಿ ದೇಶ ವಿಶ್ವಗುರುವಾಗಿ ಈಗಾಗಲೇ ಹೊರಹೊಮ್ಮುವಲ್ಲಿ ಕಾರಣವಾಗಿದೆ. ಆದರೆ ಇತಿಹಾಸದಿಂದ ಇವರನ್ನು ಮರೆಮಾಚಿ ಮುಂದಿನ ಪೀಳಿಗೆ ಯಿಂದ ಈ ಮಹಾನ್ ಚೇತನಗಳನ್ನು ಬದಿಗೊತ್ತುವ ನಿಟ್ಟಿನಲ್ಲಿ ಇವರಿಗೆ ಪದೇ ಪದೇ ಅವಮಾನವನ್ನು ಬಿಜೆಪಿಯಿಂದ ನಡೆಸಲಾಗುತ್ತಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಮಂಗಳೂರು ನೆಹರೂ ವಿಚಾರ ವೇದಿಕೆ ವತಿಯಿಂದ ಉರ್ವಾಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯ-ಸಂವಿಧಾನ-ದೂರದೃಷ್ಟಿ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

“ಬುದ್ಧ, ಬಸವಣ್ಣನವರ ತತ್ವಗಳು ಮನೆ ಮನೆಗಳಿಗೆ ತಲುಪಿರುವಂತೆ, ನೆಹರೂ, ಮಹಾತ್ಮ ಗಾಂಧಿ, ಬಿ.ಆರ್. ಅಂಬೇಡ್ಕರ್‌ರವರ ಚಿಂತನೆಗಳನ್ನು ತಲುಪಿಸಬೇಕಿದೆ. ಇದಕ್ಕಾಗಿ ಕಾರ್ನರ್, ಬೀದಿ ಸಭೆಗಳ ರೀತಿಯಲ್ಲಿ ಜನಜಾಗೃತಿಯನ್ನು ಮೂಡಿಸುವ ಕೆಲಸ ಆಗಬೇಕು” ಎಂದು ಅಭಿಪ್ರಾಯಿಸಿದರು.

ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಬ್ರಿಜೇಶ್ ಕಾಳಪ್ಪ ಮಾತನಾಡಿ, “ಗಾಂಧಿ, ನೆಹರೂ ಮತ್ತು ಅಂಬೇಡ್ಕರ್ ವಿರುದ್ಧ ಪ್ರಶ್ನೆಗಳನ್ನು ಎತ್ತುವ ಮೂಲಕ ಗೊಂದಲ ಸೃಷ್ಟಿಸಿ ನಮ್ಮ ಆಲೋಚನೆ ಗಳನ್ನು ನಿಲ್ಲಿಸುವ ಪ್ರಯತ್ನಗಳನ್ನು ಅತ್ಯಂತ ವ್ಯವಸ್ತಿತವಾಗಿ ನಡೆಸಲಾಗುತ್ತಿದ್ದು, ಇದಕ್ಕಾಗಿ ಆರೆಸ್ಸೆಸ್ ಹಾಗೂ ಬಿಜೆಪಿಯವರ ಪ್ರಶ್ನೆಗಳಿಗೆ ಪ್ರತಿ ಪ್ರಶ್ನೆಗಳನ್ನು ಕೇಳುವ ಕಾರ್ಯ ಆಗಬೇಕು. ಪ್ರಧಾನಿ ಮೋದಿಯವರೂ ಅಂಬೇಡ್ಕರ್ ಮತ್ತು ನೆಹರೂ ನಡುವೆ ಭಿನ್ನಾಭಿಪ್ರಾಯದ ಬಗ್ಗೆ ಹೇಳುತ್ತಾರೆ. ಆದರೆ ವಾಸ್ತವ ವಿಷಯ ಅವರಿಗೆಲ್ಲಾ ಗೊತ್ತಿಲ್ಲವೆಂದಲ್ಲ. ಬದಲಾಗಿ ಮೊಸರಲ್ಲಿ ಕಲ್ಲು ಹುಡುಕುವ ಅವರ ಯತ್ನ, ಇದಕ್ಕೆ ನಾವು ಸರಿಯಾಗಿ ಉತ್ತರ ನೀಡದಿದ್ದರೆ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುತ್ತಾರೆ” ಎಂದರು.

ಕೆಪಿಸಿಸಿ ವಕ್ತಾರ ಮುನೀರ್ ಜನ್ಸಾಲೆ ಮಾತನಾಡಿ, “ದೇಶದ ಶೇ. 90ಕ್ಕಿಂತ ಹೆಚ್ಚಿನ ಜನರಿಗೆ ಸ್ವಾಭಿಮಾನದ ಬದುಕು ನೀಡಿರುವುದು ಸಂವಿಧಾನ. ಹಾಗಾಗಿ ಸಂವಿಧಾನವನ್ನು ಮುಟ್ಟುವುದು ಕಷ್ಟ ಎಂದು ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಅರಿವಿದೆ. ಹಾಗಿದ್ದರೂ ಮನುಸ್ಮತಿಯೇ ನಮ್ಮ ಸಂವಿಧಾನ ಎಂದು ದೇಶದ್ರೋಹದ ಮಾತುಗಳನ್ನು ಹೇಳಲಾಗುತ್ತಿದೆ. ಅಂಬೇಡ್ಕರ್ ಮುಸ್ಲಿಂ ವಿರೋಧಿ ಎನ್ನುವ ಹೊಸ ಅಜೆಂಡಾವನ್ನು ಆರೆಸೆಸ್ ಇಟ್ಟಿದೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ದೊರಕಿದ ಮರ್ಮಾಘಾತದಿಂದ ವಿಭಜನೆಯ ಹೊರತಾಗಿ ತಮಗೆ ಉಳಿಗಾಲ ಇಲ್ಲ ಎಂದು ಅರಿತ ಆರೆಸ್ಸೆಸ್ ಈ ಕುತಂತ್ರಕ್ಕೆ ಹೊರಟಿದೆ” ಎಂದು ಅವರು ಹೇಳಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಅಭಯಚಂದ್ರ ಜೈನ್, ಶಾಸಕ  ಅಶೋಕ್ ಕುಮಾರ್ ರೈ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಹರೀಶ್ ಕುಮಾರ್, ಬೆಂಗಳೂರು ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಅನಂತ ನಾಯ್ಕ, ದ.ಕ.ಜಿಲ್ಲಾ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಪದ್ಮರಾಜ್.ಆರ್, ಮುಖ್ಯಮಂತ್ರಿ ಪ್ರಶಸ್ತಿ ವಿಜೇತ ಕಾರ್ಮಿಕ ಮುಖಂಡ ನಾಪಂಡ ಮುತ್ತಪ್ಪ ಬೆಂಗಳೂರು, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ರಕ್ಷಿತ್ ಶಿವರಾಂ, ಎಂ.ಎಸ್. ಮುಹಮ್ಮದ್, ಮ.ನ.ಪಾ ವಿಪಕ್ಷ ನಾಯಕ ಅನಿಲ್ ಕುಮಾರ್, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಇಬ್ರಾಹೀಂ ನವಾಝ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕದ ಅಧ್ಯಕ್ಷ ದಿನೇಶ್ ಮುಳೂರು, ಮಾನವ ಬಂಧುತ್ವ ವೇದಿಕೆಯ ದ.ಕ.ಜಿಲ್ಲಾ ಪ್ರಧಾನ ಸಂಚಾಲಕ ಜಯರಾಮ್ ಪೂಜಾರಿ, ಕೊಡಗು ಜಿಲ್ಲೆಯ ಪ್ರಧಾನ ಸಂಚಾಲಕ ಜನಾರ್ಧನ ಕೆ.ಎಲ್, ಬಂಟ್ವಾಳ ತಾಲೂಕಿನ ಪ್ರಧಾನ ಸಂಚಾಲಕ ಕೇಶವ ಪೂಜಾರಿ ಪಂಜಿಕಲ್ಲು ಹಾಗೂ ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಪಂಜಿಕಲ್ಲು ಮೊದಲಾದವರು ಉಪಸ್ಥಿತರಿದ್ದರು.

ವೇದಿಕೆಯ ಅಧ್ಯಕ್ಷ ನವೀನ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇತನ್ ಕಾರ್ಯಕ್ರಮ ನಿರೂಪಿಸಿದರು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios