ಮಂಗಳೂರು: ವಿಶ್ವದ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸಿ ಸಂಸತ್ ನಲ್ಲಿ ಅಪಹಾಸ್ಯ ಮಾಡಿದ ಕೇಂದ್ರ ಸಚಿವ ಅಮಿತ್ ಶಾ ರವರ ದಲಿತ ವಿರೋಧಿ ಮನಸ್ಥಿತಿ ಖಂಡನೀಯ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕ ಅಧ್ಯಕ್ಷ ದಿನೇಶ್ ಮೂಳೂರು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, “ಅಂಬೇಡ್ಕರ್ ಒಂದು ಹೆಸರಲ್ಲ ಅವರು ನಮ್ಮ ಉಸಿರು. ಅಮೆರಿಕಾ, ರಷ್ಯಾ ಸೇರಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಕೂಡ ಬಾಬಾ ಸಾಹೇಬರ ಜ್ಞಾನವನ್ನು ಒಪ್ಪಿ ತಲೆ ಬಾಗುವಾಗ, ಮನುವಾದ ಮುಖವಾಣಿಯಂತೆ ವರ್ತಿಸುತ್ತಿರುವ ಅಮಿತ್ ಶಾ ಈ ದೇಶದ ದಲಿತರಿಗೆ ಮಾರಕ. ಸಂವಿಧಾನ ಸರಿ ಇಲ್ಲ ಅದನ್ನು ಬದಲಾಯಿಸುತ್ತೇವೆ ಎನ್ನುವ ಬಿಜೆಪಿಯವರ ದಲಿತ ವಿರೋಧಿ ಮನಸ್ಥಿತಿ ಇನ್ನೊಮ್ಮೆ ಬೆತ್ತಲಾದಂತಿದೆ” ಎಂದು ಕಿಡಿಕಾರಿದ್ದಾರೆ.
“ಅಮಿತ ಶಾ ಅವರು ದೇಶದ ಅತೀ ಹೆಚ್ಚು ಗೌರವ ಹೊಂದಿರುವ ಬಹುಜನ ಸಮುದಾಯಕ್ಕೆ ಮಾಡಿದ ಅಪಮಾನ ಮಾತ್ರ ಅಲ್ಲ, ನಮ್ಮ ಜೀವ ನಾಡಿಯಾಗಿರುವ ಬಾಬಾ ಸಾಹೇಬರಿಗೆ ಮತ್ತು ಭಾರತದ ಸಂವಿಧಾನಕ್ಕೆ ಮಾಡಿದ ಅಪಮಾನವೂ ಹೌದು. ಸಂವಿಧಾನದ ಬಗ್ಗೆ ಮಾತಾಡುವ ತಾವು ಅದೇ ಸಂವಿಧಾನದ ಅಡಿಯಲ್ಲಿ ಚುನಾಯಿತರಾಗಿ ಗೃಹ ಸಚಿವರಾಗಿರುವುದನ್ನು ಮರೆತಂತಿದೆ. ಬಾಬಾ ಸಾಹೇಬರ ಬಗ್ಗೆ ಅವಹೇಳನವಾಗಿ ಮಾತನಾಡಿದ ಅವರು ಗೌರವಾನ್ವಿತ ಗೃಹ ಮಂತ್ರಿ ಸ್ಥಾನದಲ್ಲಿರಲು ಯೋಗ್ಯರಲ್ಲ, ಆದ್ದರಿಂದ ಗೌರವಾನ್ವಿತ ರಾಷ್ಟ್ರಪತಿಗಳು ಹಾಗೂ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಇವರನ್ನು ತಕ್ಷಣ ಮಂತ್ರಿ ಮಂಡಳದಿಂದ ಇಳಿಸಿ ಸಂಸದ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.