ಗುರುಪುರ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ಕಾರ್ಯನಿರ್ವಾಹಕ ಮುಹಮ್ಮದ್ ಇಮ್ರಾನ್ ಅಡ್ಡೂರು ಅವರ ವಿವಾಹ ಸಮಾರಂಭದ ಪ್ರಯುಕ್ತ ನೌಷಾದ್ ಹಾಜಿ ಸೂರಲ್ಪಾಡಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಝರಾ ಕನ್ವೆನ್ಷನ್ ಸೆಂಟರ್ ಜಿಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ರಕ್ತನಿಧಿ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ನಾಳೆ (ನ.28) ಗಂಜಿಮಠ. ಝರಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ.
ಅಡ್ಡೂರು ನಿವಾಸಿ ಎ.ಕೆ ಮುಸ್ತಫಾ ಅಡ್ಡೂರು ಅವರ ಪುತ್ರ ಮುಹಮ್ಮದ್ ಇಮ್ರಾನ್ ಅವರ ವಿವಾಹವು ಬಿ.ಕೆ ಶರೀಫ್ ಸೂರಲ್ಪಾಡಿ ಅವರ ಪುತ್ರಿ ಸಫೀದಾ ಫಾತಿಮಾ ಜೊತೆ ನ.28ರಂದು ಗಂಜಿಮಠದ ಝಾರಾ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಲಿದೆ. ಮದುಮಗ ಮುಹಮ್ಮದ್ ಇಮ್ರಾನ್ ಅವರು ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ತನ್ನ ಮದುವೆ ಆಮಂತ್ರಣ ಪತ್ರದಲ್ಲಿ ಆಧಾರ್, ರಕ್ತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಮೂಲಕ ಮಾದರಿಯಾಗಿದ್ದಾರೆ.
ಆಧಾರ್ ಮಾಡಿಸಿ 10 ವರ್ಷ ಆಗಿದ್ದಲ್ಲಿ ಅಪ್ ಡೇಟ್ ಮಾಡಿಸಿ, ಮಕ್ಕಳಿಗೆ ಐದು ವರ್ಷ ಹಾಗೂ 15 ವರ್ಷ ತುಂಬಿದ ಕೂಡಲೇ ಅಪ್ ಡೇಟ್ ಮಾಡುವಂತೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಘಟನೆಯ ಲೆಟ್ಸ್ ಬಿಕಂ ಬ್ಲಡ್ ರಿಲೇಟಿವ್ಸ್, ಎವರಿವನ್ ಕುಡ್ ಬಿ ಎ ಹೀರೊ’ ಟ್ಯಾಗ್ ಲೈನ್ ಹಾಕಲಾಗಿದೆ. ರಕ್ತದಾನ ಮಾಡುವ ಮೂಲಕ ಮೂವರ ಜೀವ ಉಳಿಸಬಹುದು ಎಂಬ ಸಂದೇಶ ಆಮಂತ್ರಣ ಪತ್ರದಲ್ಲಿ ನೀಡಲಾಗಿದೆ.
ಇಮ್ರಾನ್ ಅವರು ಕೋಸ್ಟಲ್ ಪ್ರೆಂಡ್ಸ್ ಮಂಗಳೂರು, ಅಡ್ಡೂರು ಸೆಂಟ್ರಲ್ ಕಮಿಟಿ ಸೇರಿದಂತೆ ಇನ್ನಿತರ ಸಾಮಾಜಿಕ ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ.