ತೆಲಂಗಾಣ: ಸೌರ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಅಮೆರಿಕದ ನ್ಯೂಯಾರ್ಕ್ ಕೋರ್ಟ್ ಗೌತಮ್ ಅದಾನಿ ಹಾಗೂ ಸಹಚರರ ವಿರುದ್ಧ ಲಂಚ ನೀಡಿದ ಆರೋಪ ಹೊರಿಸಿದ ಬೆನ್ನಲ್ಲೇ ಸಿಎಂ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರಕಾರ ದೇಣಿಗೆ ಒಪ್ಪಂದ ತಿರಸ್ಕರಿಸಿರುವುದು ವರದಿಯಾಗಿದೆ.
ಯಂಗ್ ಇಂಡಿಯಾ ಕೌಶಲಾಭಿವೃದ್ಧಿ ವಿಶ್ವವಿದ್ಯಾನಿಲಯಕ್ಕೆ ದೇಣಿಗೆ ನೀಡುವ ಸಂಸ್ಥೆಗಳಿಗೆ ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಕೆಲವು ಸೌಕರ್ಯಗಳನ್ನು ತೆಲಂಗಾಣ ಸರಕಾರ ಘೋಷಿಸಿತ್ತು. ಹೀಗಾಗಿ ಅದಾನಿ ಗ್ರೂಪ್ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ವಿವಿಗೆ ನೆರವಾಗಲು ಯತ್ನಿಸಿತ್ತು.
ಅಕ್ಟೋಬರ್‌ನಲ್ಲಿ ಸ್ವತಃ ಉದ್ಯಮಿ ಗೌತಮ್ ಅದಾನಿ ಅವರು ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಅದಾನಿ ಫೌಂಡೇಷನ್ ವತಿಯಿಂದ 100 ಕೋಟಿ ರೂ. ದೇಣಿಗೆ ಚೆಕ್ ಹಸ್ತಾಂತರಿಸಿದ್ದರು. ಇದೀಗ ಈ ದೇಣಿಗೆಯನ್ನೇ ಸರಕಾರ ತಿರಸ್ಕರಿಸಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು, ”ತೆಲಂಗಾಣ ಸರಕಾರವು ಅದಾನಿ ಸಂಸ್ಥೆ ಸೇರಿದಂತೆ ಯಾವುದೇ ಕಂಪನಿಯಿಂದ ಒಂದು ಪೈಸೆಯನ್ನೂ ಇದುವರೆಗೆ ದೇಣಿಗೆ ಸ್ವೀಕರಿಸಿಲ್ಲ. ಗೌತಮ್ ಅದಾನಿ ವಿರುದ್ಧ ಕೇಳಿಬಂದಿರುವ ಲಂಚ ಆರೋಪ ಹಾಗೂ ವಿವಾದಗಳಿಂದಾಗಿ ತೆಲಂಗಾಣ ಸರಕಾರ ಆ ಕಂಪನಿ ಘೋಷಿಸಿದ್ದ ದೇಣಿಗೆ ಸ್ವೀಕರಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಕಳಂಕಕ್ಕೆ ಎಡೆಮಾಡಿಕೊಡುವ ಯಾವುದರಲ್ಲೂ ಸರಕಾರ ಭಾಗಿಯಾಗುವುದಿಲ್ಲ. ಈ 100 ಕೋಟಿ ರೂ. ದೇಣಿಗೆ ತಿರಸ್ಕರಿಸುವ ನಿರ್ಧಾರವನ್ನು ಅದಾನಿ ಗ್ರೂಪ್‌ಗೆ ಪತ್ರ ಬರೆದು ಸ್ಪಷ್ಟಪಡಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಸೇರಿದಂತೆ 8 ಜನರ ವಿರುದ್ಧ ಶತಕೋಟಿ ಡಾಲರ್ ವಂಚನೆ ಮತ್ತು ಲಂಚದ ಆರೋಪವನ್ನು ಅಮೆರಿಕದ ನ್ಯೂಯಾರ್ಕ್ ಫೆಡರಲ್ ಕೋರ್ಟ್ ಮಾಡಿದೆ. ಭಾರತದಲ್ಲಿ ಸೌರಶಕ್ತಿಗೆ ಸಂಬಂಧಿಸಿದ ಒಪ್ಪಂದವನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ ಸುಮಾರು 2110 ಕೋಟಿ ರೂಪಾಯಿ ($250 ಮಿಲಿಯನ್) ಲಂಚದ ಆಮಿಷ ನೀಡಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ಕಚೇರಿ ಆರೋಪಿಸಿದೆ.
ಈ ಪ್ರಕರಣದಲ್ಲಿ ಗೌತಮ್ ಅದಾನಿ ಹೊರತಾಗಿ ಅವರ ಸೋದರಳಿಯ ಸಾಗರ್ ಅದಾನಿ, ವಿನೀತ್ ಎಸ್ ಜೈನ್, ರಂಜಿತ್ ಗುಪ್ತಾ, ಸಿರಿಲ್ ಕ್ಯಾಬೆನಿಸ್, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ ಮತ್ತು ರೂಪೇಶ್ ಅಗರ್ವಾಲ್ ವಿರುದ್ಧ ಲಂಚದ ಆರೋಪ ಹೊರಿಸಲಾಗಿದೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಅದಾನಿ ಮತ್ತು ಇತರ ಆರೋಪಿಗಳು ಬಹುಕೋಟಿ ಮೌಲ್ಯದ ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ $250 ಮಿಲಿಯನ್‌ಗಿಂತಲೂ (2100 ಕೋಟಿಗಿಂತಲೂ ಹೆಚ್ಚು) ಹೆಚ್ಚು ಲಂಚವನ್ನು ನೀಡುವುದಾಗಿ ಆಮಿಷ ನೀಡಿದ್ದಾರೆ ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.